ಮೂರು ಸಂಸದರನ್ನು ಬಗಲಲ್ಲಿಟ್ಟುಕೊಂಡು ದೆಹಲಿ ಕಾರಿಡಾರ್‌ನಲ್ಲಿ ಧಾವಂತದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷವು, ಯುಪಿಎ ಸರಕಾರದ ವಿಶ್ವಾಸಮತ ಯಾಚನೆ ಸಂದರ್ಭ ಪರವಾಗಿ ಮತ ಚಲಾಯಿಸಬೇಕೇ ಅಥವಾ ವಿರುದ್ಧವಾಗಿಯೇ ಎಂಬ ತೀರ್ಮಾನಕ್ಕೆ ಬರಲು ಶನಿವಾರವೂ ವಿಫಲವಾಗಿದ್ದು, ಭಾನುವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಶನಿವಾರ ದೆಹಲಿಯಲ್ಲಿ ಸಭೆ ಸೇರಿದ್ದು, ತಮ್ಮ ಪಕ್ಷದ ನಿಲುವು ಸ್ಪಷ್ಟಪಡಿಸಲು ದೇವೇಗೌಡ ನಿರಾಕರಿಸಿದರು. ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವುದಾಗಿ ಗೌಡರು ಹೇಳಿದರು.
ಶುಕ್ರವಾರ ಮಾಜಿಪ್ರಧಾನಿಗೆ ಕರೆ ಮಾಡಿದ್ದ ಪ್ರಧಾನಿ ಮನಮೋಹನ್ ಸಿಂಗ್, ಜು.22ರ ವಿಶ್ವಾಸಮತ ನಿರ್ಣಯಕ್ಕೆ ಬೆಂಬಲ ಯಾಚಿಸಿದ್ದರು. ಈ ಕುರಿತು ಮತ್ತಷ್ಟು ಮಾತುಕತೆ ನಡೆಸುವ ನಿಟ್ಟಿನಲ್ಲಿ ಗೌಡರು ಇಂದು ಪ್ರಧಾನಿಯವರನ್ನು ಭೇಟಿಯಾಗಲಿದ್ದಾರೆ.
ವಿಶ್ವಾಸಮತ ಕುರಿತು ಸೂಕ್ತ ನಿರ್ಣಯ ತೆಗೆದುಕೊಳ್ಳಲು ಪಕ್ಷವು ಶುಕ್ರವಾರ ದೇವೇಗೌಡರಿಗೆ ಅಧಿಕಾರ ನೀಡಿತ್ತು. ಜೆಡಿಎಸ್ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ನಿರ್ಧಾರ ಕೈಗೊಳ್ಳುವುದಾಗಿ ದೇವೇಗೌಡರು ಹೇಳಿದ್ದರು.
|