ವಿಶ್ವಾಸಮತ ನಿರ್ಣಯ ಮಂಡನೆ ವೇಳೆ ಯುಪಿಎ ಸರಕಾರದ ಪರವಾಗಿ ಮತ ಚಲಾಯಿಸುವುದಾಗಿ ಐವರು ಸದಸ್ಯಬಲದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶನಿವಾರ ಘೋಷಿಸಿದೆ.
ಜು.22ರ ಮಹಾನ್ ಮಂಗಳವಾರದಂದು ಪಕ್ಷವು ತೆಗೆದುಕೊಳ್ಳಬೇಕಾದ ನಿಲುವಿಗೆ ಅಂತಿಮ ರೂಪ ನೀಡುವ ನಿಟ್ಟಿನಲ್ಲಿ ಜೆಎಂಎಂ ಸಂಸದೀಯ ಪಕ್ಷವು ಸಭೆ ಸೇರುವ ಮುನ್ನ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಖ್ಯ ಸಚೇತಕ ಟೇಕ್‌ಲಾಲ್ ಮಹತೋ, ನಾವು ಯುಪಿಎ ಜತೆಗಿದ್ದೇವೆ ಎಂದು ಹೇಳಿದರು.
ಸರಕಾರಕ್ಕೆ ಬೆಂಬಲ ನೀಡುವ ಬಗ್ಗೆ ಪಕ್ಷದಲ್ಲಿ ಒಡಕಿಲ್ಲ ಎಂದು ತಿಳಿಸಿದ ಅವರು, ಜೆಎಂಎಂ ಮುಖ್ಯಸ್ಥ ಶಿಬು ಸೋರೆನ್ ಅವರು ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಎನ್‌ಡಿಎ ಸೋರೆನ್‌ಗೆ ಜಾರ್ಖಂಡ್ ಮುಖ್ಯಮಂತ್ರಿಯ ಪಟ್ಟ ನೀಡುವ ಆಮಿಷವೊಡ್ಡಿರುವ ಕುರಿತು ಕೇಳಿದಾಗ, ಅವರು ಮುಖ್ಯಮಂತ್ರಿಯಾಗುವುದಿದ್ದರೆ, ಅದು ಯುಪಿಎ ಕೊಡುಗೆಯ ಮೂಲಕ ಮಾತ್ರ ಸಾಧ್ಯ ಎಂದರು.
ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜೆಎಂಎಂ ಸಂಸದೀಯ ಪಕ್ಷದ ಸಭೆ ಇಂದು ಸಂಜೆ ನಡೆಯಲಿದೆ.
|