ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸದರ ಚೆಲ್ಲಾಟ: ಯುಪಿಎಗೆ ಪ್ರಾಣಸಂಕಟ  Search similar articles
PTI
ಜು.22ರ ಮಹಾನ್ ಮಂಗಳವಾರ ಸಮೀಪಿಸುತ್ತಿದ್ದು, ಒಂದೊಂದು ಸಂಸದರನ್ನು ಬಗಲಲ್ಲಿಟ್ಟುಕೊಂಡಿರುವ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಸರಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಆಟವಾಡಿಸುತ್ತಿರುವಂತೆಯೇ, ಮ್ಯಾಜಿಕ್ ಸಂಖ್ಯೆ 271ನ್ನೇ ತಗ್ಗಿಸುವ ನಿಟ್ಟಿನಲ್ಲಿ ಯುಪಿಎ ಯೋಚನೆ ಮಾಡುತ್ತಿದೆ.

ಸದ್ಯ 541 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತಕ್ಕೆ ಬೇಕಿರುವುದು 271 ಮತಗಳು. ಸಣ್ಣಪುಟ್ಟ ಪಕ್ಷಗಳೆಲ್ಲವೂ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸನ್ನು ತಲೆತಗ್ಗಿಸುವಂತೆ ಮಾಡುತ್ತಿರುವುದರಿಂದ, ಕೆಲವು ಸಂಸದರು ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ಮಾಡುವ, ಆ ಮೂಲಕ ಇರುವ ಸದಸ್ಯ ಬಲದಲ್ಲಿಯೇ ಬಹುಮತಕ್ಕೆ ಬೇಕಾದ ಮತಗಳನ್ನು ತಗ್ಗಿಸುವ ತಂತ್ರವೊಂದನ್ನು ಯುಪಿಎ ತಂತ್ರಗಾರರು ರೂಪಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಸದ್ಯಕ್ಕೆ ಯುಪಿಎ ಬಳಿ 258 ಮತ್ತು ಪ್ರತಿಪಕ್ಷಗಳೊಂದಿಗೆ 264 ಸಂಸದರಿದ್ದು, ಸಮಬಲದ ಹೋರಾಟದ ಸ್ಥಿತಿಯಿದೆ. ಅಂದರೆ ಯುಪಿಎ ಬಹುಮತಕ್ಕೆ 13 ಮತಗಳ ಕೊರತೆ ಎಂದಾಯಿತು. ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸದ 19 ಸಂಸದರು ಲಭ್ಯರಿದ್ದಾರೆ. ಆದರೆ ಏಳೆಂಟು ಸಂಸದರು ಮತದಾನದಲ್ಲಿ ಪಾಲ್ಗೊಳ್ಳದಂತೆ ಮಾಡಿದರೆ, ಮ್ಯಾಜಿಕ್ ಸಂಖ್ಯೆ ಕೂಡ ತಗ್ಗಬಹುದು ಎಂಬುದು ಲೆಕ್ಕಾಚಾರ.

ಬಿಜೆಪಿಯ ಒಬ್ಬ ಸಂಸದ ಧರ್ಮೇಂದ್ರ ಅವರು ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿದ್ದಾರೆ.

ಇಂದಿನ ವಿದ್ಯಮಾನಗಳ ಪ್ರಕಾರ:

* ದೇವೇಗೌಡರ 3 ಸಂಸದ ಬಲದ ಜೆಡಿಎಸ್ ನಿರ್ಧಾರವನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

* ಶಿಬು ಸೋರೆನ್ ಅವರ ಐದು ಸದಸ್ಯ ಬಲದ ಜೆಎಂಎಂನ ನಾಲ್ಕು ಸಂಸದರು ಎನ್‌ಡಿಎ ಜತೆ ಸೇರಿ ಮತ ಹಾಕುವುದಿಲ್ಲ ಎಂದಿದ್ದಾರೆ. ಇದರಿಂದ ಎನ್‌ಡಿಎ ಜೊತೆ ಕಣ್ಣು ಮಿಟುಕಿಸುತ್ತಿರುವ ಶಿಬು ಸೋರೆನ್ ತಮ್ಮದೇ ಪಕ್ಷದಲ್ಲಿ ಮೂಲೆಗುಂಪಾದಂತಾಗಿದೆ.

* 3 ಸದಸ್ಯ ಬಲದ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಕೂಡ ಅನಿಶ್ಚಿತತೆಯಲ್ಲಿದೆ.

* ಜೈಲು ಹಕ್ಕಿಗಳು: ಆರು ಸಂಸದರು ಜೈಲಿನಲ್ಲಿದ್ದಾರೆ. ಆರ್‌ಜೆಡಿಯ ಪಪ್ಪು ಯಾದವ್, ಮಹಮದ್ ಶಹಾಬುದ್ದೀನ್, ಎಸ್ಪಿ ಸಂಸದರಾದ ಅಫ್ಜಲ್ ಅನ್ಸಾರಿ ಮತ್ತು ಅತೀಕ್ ಅಹ್ಮದ್, ಎಲ್‌ಜೆಪಿಯ ಸೂರಜ್ ಭಾನ್ ಸಿಂಗ್ ಹಾಗೂ ಬಿಎಸ್ಪಿಯ ಉಮಾಕಾಂತ್ ಯಾದವ್. ಇವರಲ್ಲಿ ಎಸ್ಪಿಯ ಅತೀಕ್ ಅಹ್ಮದ್ ಮತ್ತು ಅಫ್ಜಲ್ ಅನ್ಸಾರಿ ಅವರು ಎದುರಾಳಿ (ಯುಪಿಎ ವಿರೋಧಿ) ಬಿಎಸ್ಪಿ ಜೊತೆ ಮತ ಹಾಕುವ ಇಚ್ಛೆಯಲ್ಲಿದ್ದಾರೆ. ಎಲ್‌ಜೆಪಿಯ ಸೂರಜ್ ಭಾನ್ ಯುಪಿಎ ಪರವಾಗಿ, ಆರ್‌ಜೆಡಿ ಕ್ರಿಮಿನಲ್ ಸಂಸದರೂ ತಮ್ಮ ಬಾಸ್ ಲಾಲು ಪ್ರಸಾದ್ ಯಾದವ್ ಜತೆಗೇ ಮತ ಹಾಕುತ್ತಾರೆ.

* ಶಿರೋಮಣಿ ಅಕಾಲಿ ದಳವಂತೂ ಯುಪಿಎ ವಿರುದ್ಧ ಮತ ಚಲಾಯಿಸುವುದಾಗಿ ಘೋಷಿಸಿದೆ. ಎಂಟು ಸಂಸದರಿಗೆ ಈಗಾಗಲೇ ಕಾಂಗ್ರೆಸ್ ವಿರುದ್ಧ ಮತ ಹಾಕಲು ವಿಪ್ ಜಾರಿ ಮಾಡಲಾಗಿದೆ.

* ಯುಪಿಎಗೆ ಹಠಾತ್ ರಕ್ಷಣೆಗೆ ಧಾವಿಸಿರುವ ಸಮಾಜವಾದಿ ಪಕ್ಷದಲ್ಲೂ ಎಲ್ಲವೂ ಸರಿಯಿಲ್ಲ. ಅದರ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಶಾಹಿದ್ ಸಿದ್ದಿಕಿ ಅವರು ಪಕ್ಷ ತೊರೆದು ಬಿಎಸ್ಪಿ ಸೇರಿದ್ದಾರೆ. ಎಸ್ಪಿಯು ಶುಕ್ರವಾರ ವಿಪ್ ಜಾರಿ ಮಾಡಿದ ಸಭೆಗೆ ಹಾಜರಾಗಿದ್ದು ಕೂಡ ಕೇವಲ 16 ಸಂಸದರು. ಅದರಲ್ಲಿ ಮುನಾವರ್ ಹಸನ್, ರಾಜನಾರಾಯಣ್ ಬುಧೋಲಿಯಾ ಮತ್ತು ಜೈಪ್ರಕಾಶ್ ಮತ್ತು ಎಸ್.ಪಿ.ಬಾಗೆಲ್ ಅವರು ಈಗಾಗಲೇ ಯುಪಿಎ ವಿರುದ್ಧ ಅಂತ ಘೋಷಿಸಿಬಿಟ್ಟಿದ್ದಾರೆ.

* ಕಾಂಗ್ರೆಸ್‌ನಲ್ಲಿ ಕೂಡ ನಾಲ್ವರು ಸಂಸದರಾದ ಆರ್.ಎಲ್.ಜಾಲಪ್ಪ, ಅಂಬರೀಷ್, ಕುಲದೀಪ್ ಬಿಷ್ಣೊಯ್, ಗುಲಾಂ ಒಸ್ಮಾನಿ ಅವರೊಂದಿಗೆ ಮತ್ತೊಬ್ಬರು ಸೇರಿಕೊಂಡು ಪಕ್ಷದ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದಾರೆ. ಅವರೇ ಹರ್ಯಾಣದ ಅರವಿಂದ ಶರ್ಮಾ. ಶನಿವಾರದ ಸೋನಿಯಾ ಗಾಂಧಿ ಸಭೆಗೆ ಅವರು ಹಾಜರಾಗಿರಲಿಲ್ಲ ಮತ್ತು ಬಿಎಸ್ಪಿಯತ್ತ ಒಲವು ತೋರಿದ್ದಾರೆ.

* ಮೂರು ಸಂಸದರಿರುವ ತೆಲಂಗಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಮಾಯಾವತಿ ಜತೆ ಕೈಜೋಡಿಸಿದ್ದು, ಮಾಯಾವತಿ ಪ್ರಧಾನಿಯಾಗುವುದರೊಂದಿಗೆ ಕಾಂಗ್ರೆಸ್ಸೇತರ ಸರಕಾರ ರಚನೆಗೆ ಸಿದ್ಧವಾಗುತ್ತಿರುವುದಾಗಿ ಹೇಳಿದ್ದಾರೆ.

* ಏಕ ಸದಸ್ಯ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು (ವಾಮರಂಗದ ಕಟ್ಟಾ ವಿರೋಧಿ ಮತ್ತು ಮಾಜಿ ಕಾಂಗ್ರೆಸ್ ಸದಸ್ಯೆ) ಏನು ಮಾಡಲಿದ್ದೇವೆ ಎಂಬುದನ್ನು ಇನ್ನೂ ಬಯಲುಗೊಳಿಸಿಲ್ಲ.

* 24 ಸಂಸದ ಬಲದ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿಯಲ್ಲೂ ಬಿರುಕು ಇದೆ ಎಂಬ ಸುದ್ದಿ ಹರಡಿದೆ. ಆರ್‌ಜೆಡಿಯ ಕೆಲವು ಸಂಸದರು ಪಕ್ಷದಲ್ಲಿ ಒಡಕು ಸೃಷ್ಟಿಸಿ ಯುಪಿಎ ವಿರುದ್ಧ ಮತ ಹಾಕಲಿದ್ದಾರೆ ಎಂದು ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿಯು ಶನಿವಾರ ಹೇಳಿಕೊಂಡಿದೆ.
ಮತ್ತಷ್ಟು
ನಮ್ಮ ಬೆಂಬಲ ಯುಪಿಎಗೆ: ಜೆಎಂಎಂ ಮುಖ್ಯಸಚೇತಕ
280 ಸದಸ್ಯರ ಬೆಂಬಲವಿದೆ: ಕಾಂಗ್ರೆಸ್
ಗೌಡರಿಂದ ಕಾಯೋ ಆಟ: ಜೆಡಿಎಸ್ ನಿರ್ಧಾರ ನಾಳೆ
ಯುಪಿಎ ವಿಶ್ವಾಸ ಮತಕ್ಕೆ ಭರ್ಜರಿ ಬೆಟ್ಟಿಂಗ್!
ವಿಶ್ವಾಸಮತ: ಸೋನಿಯಾರಿಂದ ಕಾಂಗ್ರೆಸ್ ಸಂಸದರ ಭೇಟಿ
ಯುಪಿಎ ವಿರುದ್ಧ ಮತ: ಆರ್‌ಎಸ್ಪಿ ಮತ್ತು ಎಫ್‌ಬಿ ವಿಪ್ ಜಾರಿ