ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಎನ್‌ಪಿಎ ಮತ್ತು ಎಡಪಕ್ಷಗಳು ಕೈ ಜೋಡಿಸಿದ್ದು, ಜು.22ರಂದು ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯುಪಿಎ ಸರ್ಕಾರವನ್ನು ಉರುಳಿಸುವುದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಭಾನುವಾರದಂದು ಘೋಷಿಸಿದ್ದಾರೆ.
ಅಣುಬಂಧದ ವಿಚಾರದಲ್ಲಿ ನಡೆಯುವ ವಿಶ್ವಾಸಮತದ ಸಂದರ್ಭದಲ್ಲಿ ಯುಪಿಎ ಸರಕಾರವನ್ನು ಉರುಳಿಸುವುದೇ ಪ್ರಮುಖ ಅಜೆಂಡವಾಗಿದೆ ಎಂದು ಮಾಯಾವತಿ ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
ಭಾನುವಾರದಂದು ಯುಎನ್‌ಪಿಎ ಮತ್ತು ಎಡಪಕ್ಷಗಳ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಣು ಒಪ್ಪಂದದ ವಿಚಾರದಲ್ಲಿ ಪಕ್ಷದ ಎಲ್ಲಾ 17ಸಂಸದರು ಒಗ್ಗಟ್ಟಿನಿಂದ ಇರುವುದಾಗಿ ಹೇಳಿದರು.
ಏತನ್ಮಧ್ಯೆ ಮಾತನಾಡಿದ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು, ಜು.22ರಂದು ನಾವು ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಶ್ಚಿತ ಎಂದು ತಿಳಿಸಿದರು. ಅಲ್ಲದೇ ವಿಶ್ವಾಸಮತ ಯಾಚನೆಯ ನಂತರ ಮತ್ತೆ ಮಾತುಕತೆ ನಡೆಸಿ, ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲಾಗುವುದು ಎಂದರು.
ಅಣು ಒಪ್ಪಂದದ ಕುರಿತು ನಡೆದ ಸಭೆಯಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ, ದೇವೇಗೌಡ, ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು, ಅಸ್ಸಾಂ ಗಣಪರಿಷತ್‌ನ ಬೃಂದಾವನ್ ಗೋಸ್ವಾಮಿ, ಐಎನ್‌ಎಲ್‌ಡಿಯ ಅಜಯ್ ಚೌಟಾಲಾ, ಜಾರ್ಖಂಡ್ ಸಂಸದ ಬಾಬುಲಾಲ್ ಮರಾಂಡಿ, ಸಿಪಿಎಂ ಮುಖಂಡ ಪ್ರಕಾಶ್ ಕಾರಟ್, ಸೀತಾರಾಮ್ ಯೆಚೂರಿ, ಸಿಪಿಐನ ಎ.ಬಿ.ಬರ್ಧನ್ ಮತ್ತು ಡಿ.ರಾಜಾ, ಆರ್ಎಸ್ಪಿಯ ಅಬಾನಿ ರಾಯ್ ಹಾಗೂ ಟಿ.ಜೆ.ಚಂದ್ರಚೂಡ, ಫಾರ್ವರ್ಡ್ ಬ್ಲಾಕ್‌ನ ದೇವವೃತ್ ಬಿಸ್ವಾಸ್ ಪಾಲ್ಗೊಂಡಿದ್ದರು.
|