ವಿಶ್ವಾಸಮತ ಗೊತ್ತುವಳಿಗೆ ಸನ್ನದ್ಧರಾಗುತ್ತಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, 1979ರ ನಂತರ ಸಂಸತ್ತಿನಲ್ಲಿ ವಿಶ್ವಾಸ ಮತ ಯಾಚಿಸುವ ಆರನೇ ಪ್ರಧಾನಮಂತ್ರಿಯಾಗಿದ್ದಾರೆ.
1979ರಿಂದ ಮೂರು ದಶಕಗಳಲ್ಲಿನ ಎಂಟು ವಿಶ್ವಾಸಮತ ಯಾಚನೆಯಲ್ಲಿ ಕೇವಲ ಮೂರು ಪ್ರಧಾನಮಂತ್ರಿಗಳು ಮಾತ್ರವೇ ಗೆಲುವು ಸಾಧಿಸಿದ್ದು, ಉಳಿದ ಐದು ಪ್ರಧಾನಿಗಳು ವಿಶ್ವಾಸಮತ ಸಾಬೀತುಪಡಿಸಲು ಅಸಮರ್ಥರಾಗಿದ್ದರು ಅಥವಾ ಮತಯಾಚನೆಗೆ ಮುನ್ನವೇ ರಾಜೀನಾಮೆ ನೀಡುವ ಪರಿಸ್ಥಿತಿಗೆ ಬಿದ್ದಿದ್ದರು.
ಈ ನಿಟ್ಟಿನಲ್ಲಿ, 90ರ ದಶಕದಿಂಲೂ ವಿಶ್ವಾಸಮತವು ದೇಶದ ಸಮ್ಮಿಶ್ರ ರಾಜಕೀಯದ ದಿಕ್ಕನ್ನು ಬದಲಿಸುವ ಉದಾಹರಣೆಗಳು ಇವೆ.
1979ರಲ್ಲಿ ಕಾಂಗ್ರೆಸ್ ಪಕ್ಷವು ಚೌಧರಿ ಚರಣ್ ಸಿಂಗ್ ಅವರನ್ನು ಸರಕಾರ ರಚಿಸಲು ಸಿದ್ಧರನ್ನಾಗಿಸಿದ ಸಂದರ್ಭದಲ್ಲಿ 1979ರಲ್ಲಿ ಮೊದಲ ಬಾರಿಗೆ ವಿಶ್ವಾಸಮತ ಯಾಚನೆಯ ಅವಕಾಶವು ಬಂದೊದಗಿತ್ತು. ಆದರೆ, ಚೌಧರಿ ಅವರು, ವಿಶ್ವಾಸ ಮತ ಯಾಚಿಸುವ ಬದಲಾಗಿ ರಾಜೀನಾಮೆಯನ್ನು ನೀಡಿದ್ದರು.
ನಂತರ 1990ರಲ್ಲಿ ಬಿಜೆಪಿ ಸರಕಾರವು ಬೆಂಬಲವನ್ನು ಹಿಂತೆಗೆದುಕೊಂಡ ನಂತರ ವಿ.ಪಿ.ಸಿಂಗ್ ಸರಕಾರಕ್ಕೆ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದೊದಗಿತ್ತು. ವಿ.ಪಿ.ಸಿಂಗ್ ಸರಕಾರವು ವಿಶ್ವಾಸಮತದಲ್ಲಿ ಸೋಲಬೇಕೆನ್ನುವ ಉದ್ದೇಶದಿಂದ ಅಂದು ಕಾಂಗ್ರೆಸ್ ಬಿಜೆಪಿಯೊಂದಿಗೆ ಕೈಜೋಡಿಸಿತ್ತು.
ಮೇ 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸಮತ ಯಾಚನೆಗೆ ಸನ್ನದ್ಧರಾಗಿದ್ದರೂ, ತನ್ನ ಸರಕಾರವು ಸಾಕಷ್ಟು ಸದಸ್ಯರ ಕೊರತೆಯನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಯ ಮುನ್ನವೇ ರಾಜೀನಾಮೆ ನೀಡಿದ್ದರು.
ಅದೇ ವರ್ಷ ಜೂನ್ ತಿಂಗಳಲ್ಲಿ ಯುನೈಟೆಡ್ ಫ್ರಂಟ್ ಸರಕಾರದ ಮುಖ್ಯಸ್ಥರಾಗಿ ಎಚ್.ಡಿ.ದೇವೇಗೌಡ ಅವರು ವಿಶ್ವಾಸಮತ ಯಾಚನೆಯಲ್ಲಿ ವಿಜಯ ಸಾಧಿಸಿದ್ದರು. ಆದರೆ, ನಂತರ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡ ಫಲವಾಗಿ ಸರಕಾರ ಮುನ್ನಡೆಸುವಲ್ಲಿ ಎಡವಿದ್ದರು.
ಮೇ 1997ರಲ್ಲಿ ಯುನೈಟೆಡ್ ಫ್ರಂಟ್ ಸರಕಾರದಲ್ಲಿನ ದೇವೇಗೌಡ ಅವರ ಸ್ಥಾನದಲ್ಲಿ ಮುನ್ನಡೆಯುತ್ತಿದ್ದ ಇಂದ್ರ ಕುಮಾರ್ ಗುಜ್ರಾಲ್ ಅವರು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ್ದರು.
ತದನಂತರ, 1998ರಲ್ಲಿ ಗುಜ್ರಾಲ್ ಸರಕಾರವು ಪತನಗೊಂಡು, 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರಕಾರವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ವಾಜಪೇಯಿ ಸರಕಾರವು ವಿಶ್ವಾಸಮತದಲ್ಲಿ ಜಯಗಳಿಸಿತ್ತು.
ಆದರೆ, 13 ತಿಂಗಳ ನಂತರ, ಎಐಎಡಿಎಂಕೆ ಪಕ್ಷವು ವಾಜಪೇಯಿ ಸರಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡ ನಿಟ್ಟಿನಲ್ಲಿ, ಮೇ 1999ರಲ್ಲಿ ವಾಜಪೇಯಿ ಸರಕಾರವು ವಿಶ್ವಾಸ ಗೊತ್ತುವಳಿ ಮಂಡಿಸಿದ ವೇಳೆ ಕೇವಲ ಒಂದು ಮತದಿಂದ ಸೋತು ಹೋಗಿದ್ದರು. ಈ ನಿಟ್ಟಿನಲ್ಲಿ ಎರಡು ಬಾರಿ ವಿಶ್ವಾಸಮತದಲ್ಲಿ ಸೋಲುಂಡ ಏಕೈಕ ಪ್ರಧಾನಿ ಎಂಬುದಾಗಿ ವಾಜಪೇಯಿ ಹೆಸರುಗಳಿಸಿದ್ದರು.
ಈಗ ಜುಲೈ 21,2008ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಗೊತ್ತುವಳಿಗೆ ಸನ್ನದ್ಧರಾಗುತ್ತಿದ್ದು, ಲೋಕಸಭೆಯಲ್ಲಿ ಮತ ನಡೆದ ನಂತರ ಸಿಂಗ್ ಅವರ ಹಣೆಬರಹವು ತಿಳಿಯಲಿದೆ.
|