ಅಣು ಒಪ್ಪಂದದ ಹಿನ್ನೆಲೆಯಲ್ಲಿ ಯುಪಿಎ ಸರಕಾರದ ಅಳಿವು-ಉಳಿವಿನ ಬಗ್ಗೆ ಸಂಸತ್ತಿನಲ್ಲಿ ನಡೆಯುತ್ತಿರುವ ನೇರ ಚರ್ಚೆಯು ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವಂತೆಯೇ, ಅಮೆರಿಕದೊಂದಿಗಿನ ಪರಮಾಣು ಒಪ್ಪಂದವನ್ನೇ ರದ್ದುಗೊಳಿಸಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ,
ದಿಢೀರ್ ಪತ್ರಿಕಾ ಗೋಷ್ಠಿಯನ್ನು ನಡೆಸಿದ ಅವರು, ಪರಮಾಣು ಒಪ್ಪಂದವು ದೇಶದ ಹಿತಾಸಕ್ತಿಯ ಉದ್ದೇಶದಿಂದ ನಡೆಸಲಾಗುತ್ತಿಲ್ಲ, ಇದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಶ್ವಾಸಮತ ಯಾಚನೆಯಲ್ಲಿ ಯುಪಿಎ ಸರಕಾರವು ಗೆಲ್ಲಲಿದೆಯೇ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳವಾರ ಸಂಜೆ ಆರು ಗಂಟೆಗೆ ಮತಯಾಚನೆ ಮುಗಿಯುವ ವೇಳೆಗೆ ಸರಕಾರವು ಪತನಗೊಂಡಿರುತ್ತದೆ ಎಂಬುದಾಗಿ ಉತ್ತರಿಸಿದರು.
ಚುನಾವಣೆಯು ಸಮೀಪಿಸುತ್ತಿದ್ದು, ಪರಮಾಣು ಒಪ್ಪಂದದ ಕುರಿತಾಗಿ ಮುಂದಿನ ಸರಕಾರವು ನಿರ್ಧಾರ ಕೈಗೊಳ್ಳಲಿ ಎಂದ ಮಾಯಾವತಿ, ಸದ್ಯಕ್ಕೆ ಸರಕಾರವು ಒಪ್ಪಂದವನ್ನು ಅಮಾನತ್ತಿನಲ್ಲಿರಿಸಬೇಕು ಎಂದು ಆಗ್ರಹಿಸಿದರು.
|