1998ರಲ್ಲಿ ಎನ್‌ಡಿಎ ಸರಕಾರ ನಡೆಸಿದ್ದ ಪೋಖ್ರನ್-II ಪರಮಾಣು ಪರೀಕ್ಷೆಗಳನ್ನು ತಾನು ವಿರೋಧಿಸಿರಲಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು. ಸೋಮವಾರ ಲೋಕಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಮೇಲಿನ ಚರ್ಚೆ ಸಂದರ್ಭ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಧಾನಿ, ಪರಮಾಣು ಪರೀಕ್ಷೆಗಳ ನಂತರ ಭಾರತಕ್ಕೆ ಆರ್ಥಿಕ ದಿಗ್ಬಂಧನ ವಿಧಿಸಿದ ಸಂದರ್ಭ ಸರಕಾರವನ್ನು ಟೀಕಿಸಿದ್ದೆ ಎಂದು ನುಡಿದರು.
ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರು ಚರ್ಚೆ ಸಂದರ್ಭ ಮಾತನಾಡುತ್ತಾ, ಮನಮೋಹನ್ ಸಿಂಗ್ ಅವರು ಪೋಖ್ರನ್-II ಪರೀಕ್ಷೆಯನ್ನು ವಿರೋಧಿಸಿದ್ದರು ಎಂದು ಪ್ರಸ್ತಾಪಿಸಿದರು. ಈ ಬಗ್ಗೆ ಉತ್ತರಿಸಿದ ಪ್ರಧಾನಿ, ಈ ಕುರಿತು ಹಳೆಯ ದಾಖಲೆಗಳನ್ನು ಕೆದಕಿದರೆ ಸತ್ಯ ಹೊರಬಂದೀತು ಎಂದು ಹೇಳಿದರಲ್ಲದೆ, ಬಿಜೆಪಿ ನಾಯಕರೊಂದಿಗೆ ಈ ಕುರಿತು ತಾನು ತೀಕ್ಷ್ಣ ವಾಗ್ವಾದ ನಡೆಸಿರುವ ಕುರಿತ ಆಡ್ವಾಣಿ ಉಲ್ಲೇಖಕ್ಕೆ ಉತ್ತರಿಸುತ್ತಾ, ಈ ವಾಗ್ವಾದವೇನಿದ್ದರೂ ಆರ್ಥಿಕ ದಿಗ್ಬಂಧನಗಳ ಆಧಾರಿತವಾಗಿತ್ತು ಎಂದು ಸ್ಪಷ್ಟಪಡಿಸಿದರು.
|