ಸರಕಾರದ ಭವಿಷ್ಯ ನಿರ್ಧಾರವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿರುವುದರೊಂದಿಗೆ, ಇಂದು ಲೋಕಸಭೆಯಲ್ಲಿನ ವಿಶ್ವಾಸಮತ ಯಾಚನೆಯು ಮೂರು ದಶಕಗಳಲ್ಲಿ 11ನೇ ವಿಶ್ವಾಸಮತ ಯಾಚನೆಯಾಗಿದೆ. ಏನೇ ಆದರೂ, ವಿಶ್ವಾಸಮತದಲ್ಲಿ ಸರಕಾರವು ಗೆಲುವು ಸಾಧಿಸಲಿದೆ ಎಂಬುದಾಗಿ ಮನಮೋಹನ್ ಸಿಂಗ್ ಅತ್ಯಂತ ವಿಶ್ವಾಸವನ್ನು ಹೊಂದಿದ್ದಾರೆ.
ಬಹುಮತವನ್ನು ಹೊಂದುವ ಮೂಲಕ ಗೆಲುವು ಸಾಧಿಸುವುದು ನಿಶ್ಚಿತ ಎಂದು ಯುಪಿಎ ಮತ್ತು ಪ್ರಧಾನಮಂತ್ರಿ ಸ್ಪಷ್ಟಪಡಿಸುತ್ತಿದ್ದರೂ, ಮುಳುಗುತ್ತಿರುವ ಯುಪಿಎ ಹಡಗನ್ನು ರಕ್ಷಿಸುವ ಸಲುವಾಗಿ, ವಿಶ್ವಾಸಮತದಾನದ ವೇಳೆ ಸಂಸದರ ಗೈರುಹಾಜರಾತಿಯನ್ನು ತಪ್ಪಿಸಲು ಸರಕಾರವು ಕೊನಯಕ್ಷಣದ ಪ್ರಯತ್ನ ನಡೆಸುತ್ತಲೇ ಇದೆ.
ಇದರೊಂದಿಗೆ, ವಿರೋಧಪಕ್ಷವನ್ನು ವಿಶ್ವಾಸಮತದಲ್ಲಿ ಸೋಲಿಸುವ ನಿರ್ಧಿಷ್ಟ ಗುರಿಯನ್ನು ಹೊಂದಿರುವ ಯುಪಿಎ ಸರಕಾರ, ಯುಪಿಎ ಪರ ಮತಹಾಕುವಂತೆ ಸಂಸದರ ಮನವೊಲಿಸುವ ಕಾರ್ಯವನ್ನು ಮುಂದುವರಿಸಿದೆ.
ಜೆಡಿ(ಯು) ಮತ್ತು ಬಿಜೆಡಿಯ ಸಂಸದರು ಗೈರುಹಾಜರಾಗುವ ಸಂಭವವಿದ್ದು, ತಾನು ವಿಶ್ವಾಸಮತದಲ್ಲಿ ಭಾಗವಹಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ. ಇದರೊಂದಿಗೆ, ಅಕಾಲಿ ದಳದ ಮೂರು ಸಂಸದರು, ಶಿವಸೇನಾದ ಮೂರು ಸಂಸದರು ಮತ್ತು ಬಿಜೆಪಿಯ ಐದು ಸಂಸದರು ಕೂಡಾ ಗೈರು ಹಾಜರಾಗುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳು ಹೇಳುತ್ತವೆ.
ಏನೇ ಆದರೂ, ವಿಶ್ವಾಸಮತದಲ್ಲಿ ಯುಪಿಎಗೆ ಬೆಂಬಲ ನೀಡುವಂತೆ ಮಾಡಲು ಸಂಸದರೊಂದಿಗೆ ಸರಕಾರವು ಕುದುರೆವ್ಯಾಪಾರ ನಡೆಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಪ್ರಧಾನಿ ಸಿಂಗ್, ಆರೋಪವನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಿ ತೋರಿಸಬೇಕು ಎಂಬ ತಿರುಗೇಟು ನೀಡಿದ್ದಾರೆ.
ಹೆಚ್ಚಿನ ಸ್ವತಂತ್ರ ಮತ್ತು ಸಣ್ಣ ಪಕ್ಷಗಳ ಬೆಂಬಲವನ್ನು ಗಳಿಸಿಕೊಳ್ಳಲು ಯುಪಿಎ ಕಾರ್ಯನಿರ್ವಾಹಕರು ಶಕ್ತರಾಗುವುದರೊಂದಿಗೆ, ಸೋಮವಾರ ವಿಶ್ವಾಸಮತ ಚರ್ಚೆಯ ಅಂತ್ಯದ ವೇಳೆ ಮನಮೋಹನ್ ಸಿಂಗ್ ಸರಕಾರವು ಸಾಕಷ್ಟು ಸಂಖ್ಯಾಬಲವನ್ನು ಪಡೆದುಕೊಂಡು ಗೆಲುವು ಸಾಧಿಸುವ ಸ್ಪಷ್ಟ ಸೂಚನೆಗಳು ದೊರೆತಿವೆ.
ಸಮಾಜವಾದಿ ಪಕ್ಷದ 39 ಸಂಸದರ ಬೆಂಬಲದೊಂದಿಗೆ ಯುಪಿಎಯ ಸಾಮರ್ಥ್ಯವು 276. ಇದು ವಿಶ್ವಾಸಮತಕ್ಕೆ ಅಗತ್ಯವಿರುವ 271 ಸಂಖ್ಯಾಬಲದಿಂದ ಐದು ಸಂಖ್ಯೆ ಹೆಚ್ಚೇ ಇದೆ ಎಂಬುದು ವಿಶ್ವಾಸಮತದಲ್ಲಿನ ಪ್ರಣಬ್ ಮುಖರ್ಜಿ ಅವರ ಅಂಕಗಣಿತದ ವಿವರಣೆಯಾಗಿದೆ.
|