ವಿಶ್ವಾಸಮತದ ಮುಂಚಿತವಾಗಿ ತನ್ನ ಪಕ್ಷದ ಆರು ಸಂಸದರನ್ನು ಒತ್ತಾಯಪೂರ್ವಕವಾಗಿ ಉತ್ತರ ಪ್ರದೇಶ ಭವನದಲ್ಲಿ ಅಡಗಿಸಡಲಾಗಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯವತಿ 'ಒತ್ತಡಹೇರುವ ರಾಜಕೀಯ' ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಯಾವತಿ ವಶದಲ್ಲಿರುವ ಒಂದು ಅಥವಾ ಇಬ್ಬರು ಸಂಸದರು ತನ್ನ ಪಕ್ಷದ ಬಂಡುಕೋರರಾಗಿರಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.
ತನ್ನ ಪಕ್ಷದ ಸಂಸದರನ್ನು ಸೆಳೆದುಕೊಳ್ಳಲು ಮಾಯಾವತಿ ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ಈ ಸಂಸದರು ಮಾಯಾವತಿ ಸರಕಾರದಿಂದ ನಿರಂತರ ಬೆದರಿಕೆ ಎದುರಿಸುತ್ತಿದ್ದರು ಎಂದು ಆಪಾದಿಸಿದ್ದಾರೆ.
ತನ್ನ ಪಕ್ಷದೊಳಗೆ ಯಾವುದೇ ಒಡಕಿಲ್ಲ ಎಂದು ನುಡಿದ ಸಿಂಗ್, ತನ್ನ ಪಕ್ಷದಲ್ಲಿ 38 ಸದಸ್ಯರಿದ್ದಾರೆ ಎಂದು ನುಡಿದರಲ್ಲದೆ, ಪಕ್ಷದೊಳಗಿನ ಬಿರುಕಿನ ವದಂತಿಯನ್ನು ಮಾಯಾವತಿ ಹರಿಬಿಟ್ಟಿದ್ದಾರೆ ಎಂದು ದೂರಿದರು. ಪಕ್ಷದಿಂದ ಹೊರನಡೆದವರ ಟಿಕೆಟನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ವಿಶ್ವಾಸಮತದ ಮುಂದಾಗಿ ಸಂಸದರನ್ನು ಓಲೈಸುತ್ತಿರುವ ಬಗ್ಗೆ ಮಾಯಾವತಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಂಗ್, ಯುಪಿಎಗೆ 36 ಎಸ್‌ಪಿ ಸಂಸದರ ಬೆಂಬಲವಿದ್ದು, ವಿಶ್ವಾಸಮತದಲ್ಲಿ ಯುಪಿಎ ಗೆಲುವು ಸಾಧಿಸಲಿದೆ ಎಂದು ಒತ್ತಿ ಹೇಳಿದರು.
ಈ ನಡುವೆ, ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನು ನಡೆಸಿದ ಅಮರ್ ಸಿಂಗ್, ರಾಜನಾಥ್ ಸಿಂಗ್, ಆಡ್ವಾಣಿ ದೇಶವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದರು.
|