ನಾನು ಒಬ್ಬ ಸಂಸದನಾಗಿ ಮಾತನಾಡುತ್ತಿಲ್ಲ, ಒಬ್ಬ ಭಾರತೀಯನಾಗಿ ಮಾತನಾಡುತ್ತೇನೆ ಎಂದು ತನ್ನ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಇಂಧನ ಭದ್ರತೆ ಮತ್ತು ಬಡತನಕ್ಕೆ ನೇರ ಸಂಬಂಧವಿದೆ ಎಂದು ಉದಾಹರಣೆ ಸಮೇತ ಸಮರ್ಥಿಸಲು ಪ್ರಯತ್ನಿಸಿದರು.
ವಿಪಕ್ಷಗಳ ಗದ್ದಲದ ನಡುವೆಯೇ ಮಾತನಾಡಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪ್ರಯತ್ನಿಸಿದರಾದರೂ, ಒಂದು ಹಂತದಲ್ಲಿ ವಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸದಸ್ಯರು ತಮ್ಮತಮ್ಮ ಸ್ಥಾನಗಳಿಂದ ಎದ್ದು ನಿಂತು ಪರವಿರೋಧ ಮಾತನಾಡತೊಡಗಿದ್ದು, ಯೂರು ಏನು ಮಾತನಾಡುತ್ತಿದ್ದಾರೆಂದೇ ಕೇಳದ ಪರಿಸ್ಥಿತಿ ಉಂಟಾಗಿತ್ತು.
ಸದನ ಮುಂದೂಡಿಕೆ ಮೌನವಾಗಿರುವಂತೆ ಮತ್ತು ತಮ್ಮತಮ್ಮ ಸ್ಥಾನಗಳಿಗೆ ತೆರಳಿ ಎಂದು ಸ್ಪೀಕರ್ ಪದೇಪದೇ ಮನವಿ ಮಾಡಿದರೂ ಪರಿಸ್ಥಿತಿ ಸುಧಾರಿಸದಿದ್ದಾಗ ಸ್ಪೀಕರ್ ಚಟರ್ಜಿ ಸದನವನ್ನು ಅಪರಾಹ್ನ ಎರಡು ಗಂಟೆಗಳ ಕಾಲ ಮುಂದೂಡಿದರು.
ಅಣು ಒಪ್ಪಂದ ರಾಷ್ಟ್ರಕ್ಕೆ ಯಾಕೆ ಮಹತ್ವವಾಗಿದೆ ಎಂದು ವಿವರಿಸಲು ಯತ್ನಿಸಿದ ರಾಹುಲ್, ರಾಷ್ಟ್ರವು ಶೇ.9ರ ಅಭಿವೃದ್ಧಿ ಸಾಧಿಸಲು ಇಂಧನವೇ ಪ್ರಮುಖ ಜವಾಬ್ದಾರಿ ಎಂದು ನುಡಿದರು. ನಾವು ಇಂಧನ ಭದ್ರತೆಯನ್ನು ಸಾಧಿಸದಿದ್ದರೆ ನಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಅವರು ನುಡಿದರು.
ಈ ಸದನದಲ್ಲಿ ಪ್ರತಿಯೊಬ್ಬರು ರಾಷ್ಟ್ರದ ಹಿತಾಸಕ್ತಿಯಿಂದ ಮಾತನಾಡುತ್ತಾರೆ ಎಂದು ತಾನು ಭಾವಿಸುವುದಾಗಿ ಅವರು ತನ್ನ ಭಾಷಣದಲ್ಲಿ ನುಡಿದರು.
|