ಸಾಯಂಕಾಲ ನಡೆಯುವ ವಿಶ್ವಾಸ ಮತದಾನದ ಫಲಿತಾಂಶವು ಟೈ ಆದರೆ ಏನಾಗುತ್ತದೆ? ಖಂಡಿತವಾಗಿ ಸ್ಪೀಕರ್ ಸೋಮನಾಥ ಚಟರ್ಜಿಯವರಿಗೆ ಮತ ಚಲಾಯಿಸುವ ಅವಕಾಶ ದೊರೆಯುತ್ತದೆ. ಆದರೆ ಅವರು ಯಾರ ಪರವಾಗಿ ಮತ ಚಲಾಯಿಸುತ್ತಾರೆ ಎಂಬುದೇ ಎಲ್ಲರನ್ನು ಕಾಡುವ ಪ್ರಶ್ನೆ. ಸರಕಾರದ ಪರವೋ ಅಥವಾ ಅದರ ವಿರುದ್ಧವೋ?
ಆದರೆ ತತ್ವ-ಸಿದ್ಧಾಂತಗಳತ್ತ ನೋಡಿದರೆ, ಸ್ಪೀಕರ್ ಅವರು ಸರಕಾರದ ಪರವಾಗಿ ಮತ ಚಲಾಯಿಸುವುದು ಸಂಪ್ರದಾಯ. ಅಂದರೆ ಸರಕಾರದ ರಕ್ಷಣೆಗೆ ಅವರು ಧಾವಿಸಬೇಕಾದುದು ಅವರ ಧರ್ಮವೂ ಹೌದು. ಆದರೆ ಅವರ ಮಾತೃಪಕ್ಷವಾಗಿರುವ ಸಿಪಿಐಎಂ ಸರಕಾರದ ವಿರುದ್ಧವಿದೆ ಮತ್ತು ಮಾತು ಕೇಳದಿರುವುದಕ್ಕಾಗಿ ಸ್ವತಃ ಚಟರ್ಜಿ ವಿರುದ್ಧವೇ ಕ್ರಮ ಕೈಗೊಳ್ಳುವ ಸೂಚನೆಗಳನ್ನು ನೀಡಿದೆ. ಹೀಗಿರುವಾಗ ಅವರು ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸುತ್ತಾರೆಯೇ ಅಥವಾ ವಿರುದ್ಧವಾಗಿಯೇ ಎಂಬುದು ಇನ್ನೂ ಬಯಲಾಗದ ರಹಸ್ಯ.
ಸಂಸದೀಯ ನಡಾವಳಿಗಳ ಕುರಿತು ಲಭ್ಯವಿರುವ ಅಧಿಕೃತ ಸೂಚನಾ ಪತ್ರದ ಉಲ್ಲೇಖದ ಪ್ರಕಾರ, "ಅವರು (ಸ್ಪೀಕರ್) ಯಥಾಸ್ಥಿತಿ ಕಾಯ್ದುಕೊಳ್ಳುವ ಅಥವಾ ಪ್ರಶ್ನೆಯ ಪರಿಹಾರವನ್ನು ಮುಂದೂಡುವಂತಾಗುವ ನಿಟ್ಟಿನಲ್ಲಿ ಯಾವತ್ತೂ ಮತ ಹಾಕುತ್ತಾರೆ". ಯಥಾಸ್ಥಿತಿ ಕಾಯ್ದುಕೊಳ್ಳುವುದೆಂದರೆ, ಸ್ಪೀಕರ್ ಅವರ ಮತವು ಗೊತ್ತುವಳಿಯನ್ನು ನಿರ್ಧರಿಸುವುದಲ್ಲ, ಬದಲಿಗೆ ಮತ್ತಷ್ಟು ಚರ್ಚೆ ನಡೆಸಲು ಸದನಕ್ಕೆ ಅವಕಾಶ ನೀಡುವುದು. ಈಗ ಮತ ಹಾಕುವ ಅನಿವಾರ್ಯತೆ ಎದುರಾದರೆ ಚಟರ್ಜಿ ಸಂಪ್ರದಾಯ ಪಾಲಿಸುತ್ತಾರೆಯೇ ಅಥವಾ ಅವರು ಕೂಡ ಸರಕಾರವನ್ನು ವಿರೋಧಿಸುತ್ತಿರುವ ಸಿಪಿಎಂ ಸದಸ್ಯನಾಗಿ, ಸರಕಾರದ ಪತನಕ್ಕೆ ಕಾರಣರಾಗುತ್ತಾರೆಯೇ? ಎಂಬುದು ಕೆಲವೇ ಗಂಟೆ ಕಾದುನೋಡಬೇಕಾದ ಅಂಶ.
ಟೈ ಆದರೆ, ಸ್ಪೀಕರ್ ಅವರು ಸರಕಾರದ ವಿರುದ್ಧ ಮತ ಚಲಾಯಿಸಿದರೆ, ಅಲ್ಲಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಒಬ್ಬ ಸಭಾಧ್ಯಕ್ಷರು ಸರಕಾರವನ್ನು ಉರುಳಿಸಿದ ಹೆಸರಿಗೆ ಪಾತ್ರರಾಗುತ್ತಾರೆ.
|