ಸಂಸತ್ತಿನಲ್ಲಿ ಸೋಮವಾರದ ವಿಶ್ವಾಸಮತ ಚರ್ಚೆಯ ವೇಳೆ ತನ್ನ ಭಾಷಣದಲ್ಲಿ, ಯುಪಿಎಯು ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಬಹುಜನ ಸಮಾಜವಾದಿ ಪಕ್ಷದ ಸಂಸದ ಬ್ರಜೇಶ್ ಪಾಟಕ್ ಅವರ ಆರೋಪವು, ಮತ್ತಷ್ಟು ಕೆಟ್ಟ ತಿರುವನ್ನು ಪಡೆದುಕೊಂಡಿದ್ದು, ದೇಶದ ಪ್ರಮುಖ ತನಿಖಾ ಸಂಸ್ಥೆಯನ್ನು ಕಾಂಗ್ರೆಸ್ ಪಕ್ಷವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಂಗಳವಾರದ ಸಂಸತ್ ಅಧಿವೇಶನದಲ್ಲಿ ಬಿಎಸ್‌ಪಿ ಸದಸ್ಯರು ದೂರಿದರು.
ಹಿರಿಯ ಸಿಬಿಐ ಅಧಿಕಾರಿಗಳು ತಮ್ಮನ್ನು ಕಳೆದ ಕೆಲವು ದಿನಗಳಿಂದ ಭೇಟಿ ಮಾಡಿ ಯುಪಿಎ ಸರಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಅಲ್ಲದೆ, ಯುಪಿಎಗೆ ಮತಹಾಕದಿದ್ದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಸಿಬಿಐ ತನಿಖೆಯನ್ನು ನಡೆಸಲಾಗುವುದು ಎಂಬುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಬಿಎಸ್‌ಪಿ ಸದಸ್ಯರು ಸರಣಿಯೋಪಾದಿಯಲ್ಲಿ ವಿಶ್ವಾಸ ಗೊತ್ತುವಳಿಯ ಚರ್ಚೆ ವೇಳೆಗೆ ಆರೋಪಿಸಿದರು.
ಅಲ್ಲದೆ, "ನಾವು ಸಂಪೂರ್ಣವಾಗಿ ಭೀತಿಯಿಂದಿದ್ದು ನಮಗೆ ರಕ್ಷಣೆಯ ಅಗತ್ಯವಿದೆ" ಎಂಬುದಾಗಿ ಇಬ್ಬರು ಬಿಎಸ್‌ಪಿ ಸದಸ್ಯರು ಮನವಿ ಮಾಡಿದರು.
ಬಿಎಸ್‌ಪಿಯ ಈ ಆರೋಪಕ್ಕೆ ಪ್ರತಿಕ್ರಯಿಸಿರುವ ಸ್ಪೀಕರ್ ಚಟರ್ಜಿ, ಸಂಪೂರ್ಣ ಭದ್ರತೆಯನ್ನು ನೀಡಲು ಒಪ್ಪಿಕೊಂಡಿದ್ದು, ಸದಸ್ಯರ ನಿವಾಸದ ಸುತ್ತ ಭದ್ರತೆಯನ್ನು ನೀಡುವ ಬಗ್ಗೆ ಈ ವಿಚಾರವನ್ನು ಗೃಹ ಮಂತ್ರಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು.
ಮಂಗಳವಾರದ ಅಧಿವೇಶನವು ಅತ್ಯಂತ ಕೋಲಾಹಲದಿಂದ ಕೂಡಿದ್ದು, ಇತರ ಪಕ್ಷಗಳ ಅನೇಕ ಸದಸ್ಯರು ಕೂಡಾ ಸರಕಾರದ ಮೇಲೆ ಹರಿಹಾಯ್ದರಲ್ಲದೆ, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಲು ಪ್ರತ್ಯೇಕ ಸದನ ಸಮಿತಿಯನ್ನು ರಚಿಸುವಂತೆಯೂ ಒತ್ತಾಯಿಸಿದರು.
ಏತನ್ಮಧ್ಯೆ, ಬಹುಮತವನ್ನು ಪಡೆದುಕೊಳ್ಳಲು ಯುಪಿಎ ಸರಕಾರವು ಸಿಬಿಐಯನ್ನು ಬಳಸಿಕೊಳ್ಳುತ್ತಿದೆ ಎಂಬುದಾಗಿ ಸಿಪಿಎಂ ಸಂಸದ ಆಚಾರಿ ಆರೋಪಿಸಿದರು.
|