ಲೋಕಸಭೆಯಲ್ಲಿ ಮಂಡಿಸಲಾಗಿರುವ ವಿಶ್ವಾಸಮತ ಗೊತ್ತುವಳಿಯ ಚರ್ಚೆಯ ವೇಳೆಗೆ ಮಾತನಾಡುತ್ತಿದ್ದ ಹಣಕಾಸು ಸಚಿವ ಪಿ.ಚಿದಂಬರಂ ಅವರ ಭಾಷಣದ ವೇಳೆ ನಿರಂತರವಾಗಿ ಅಡ್ಡಿಮಾಡುತ್ತಿದ್ದ ಸಿಪಿಐ(ಎಂ) ಎಡಪಕ್ಷ ಸದಸ್ಯರ ವಿರುದ್ಧ ಸ್ಪೀಕರ್ ಸೋಮನಾಥ್ ಚಟರ್ಜಿ ಬೇಸರ ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ, ಪ್ರಮುಖ ವಿರೋಧ ಪಕ್ಷ ಬಿಜೆಪಿಯನ್ನು ಎತ್ತಿತೋರಿಸಿದ ಅವರು, ಬಿಜೆಪಿಯು ಯಾವುದೇ ಅಡ್ಡಿಯನ್ನು ಉಂಟುಮಾಡುತ್ತಿಲ್ಲ ಅವರಿಂದ ನೀವು ಪಾಠ ಕಲಿಯಬೇಕು ಎಂದು ಕಟುವಾಗಿ ಗದರಿಸಿದರು. "ಇದಕ್ಕೆಲ್ಲಾ ನಾನು ಅನುಮತಿ ನೀಡುತ್ತೇನೆಂದು ದಯವಿಟ್ಟು ತಿಳಿಯಬೇಡಿ... ನೀವು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ" ಎಂಬುದಾಗಿ ಎಚ್ಚರಿಕೆ ನೀಡಿದರು.
ಇನ್ನೊಂದಂಶದಲ್ಲಿ, ಸಿಪಿಐ(ಎಂ) ಸದಸ್ಯ ಎನ್.ಎನ್.ಕೃಷ್ಣದಾಸ್ ಅವರನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡ ಚಟರ್ಜಿ, ತನ್ನನ್ನು ತಾನೇ ವೈಭವೀಕರಿಸುತ್ತೇನೆಂದು ಕೃಷ್ಣದಾಸ್ ತಿಳಿದುಕೊಳ್ಳಬಾರದು. ಅಲ್ಲದೆ, ಸಿಪಿಐ(ಎಂ) ಪಕ್ಷವು ಅಶಿಸ್ತಿನಿಂದ ಕೂಡಿದೆ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ಭಾಷಣದ ವೇಳೆ ಸದನದಲ್ಲಿ ಕೋಲಾಹಲವೆದ್ದಾಗ ಅತಿಯಾಗಿ ಕುಪಿತಗೊಂಡ ಚಟರ್ಜಿ, ದೇಶದ ಸಂಸತ್ತು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದೆ... ಅಧೋಗತಿಗೆ ತಲುಪಿದೆ... ಇದು ನಾಚಿಕೆಗೇಡು, ಸಂಸತ್ ಸದಸ್ಯರು ಚುನಾವಣೆ ಎದುರಿಸುವ ಪರಿಸ್ಥಿತಿಯು ಬಂದಾಗ ದೇಶವು ತೀರ್ಪನ್ನು ನೀಡಲಿದೆ ಎಂದರು.
|