ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್  Search similar articles
ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ವಿಶ್ವಾಸಮತ ಚಲಾವಣೆಯಲ್ಲಿ, ಯುಪಿಎ ಸರಕಾರವು 275 ಮತಗಳನ್ನು ಗೆದ್ದು ಅಮೆರಿಕದೊಂದಿಗಿನ ಅಣುಒಪ್ಪಂದದಲ್ಲಿ ಮುಂದುವರಿಯಲು ತನ್ನ ಹಾದಿ ಸುಗಮಗೊಳಿಸಿಕೊಂಡಿದೆ.

ಕೊನೆಯ ಕ್ಷಣಗಳ ನಿರೀಕ್ಷೆ, ಹಾಗೂ ಲೆಕ್ಕಾಚಾರಗಳ ಪ್ರಕಾರ ಸರಕಾರ 272 ಮತಗಳನ್ನು ಪಡೆಯಬಹುದೆಂಬುದಾಗಿ ಹೇಳಲಾಗಿತ್ತು. ಆದರೆ ಸರಕಾರವು 275 ಮತಗಳನ್ನು ಪಡೆದಿದ್ದು, 19 ಮತಗಳ ಅಂತರದಿಂದ ಸದನದ ವಿಶ್ವಾಸ ಗೆದ್ದುಕೊಂಡಿದೆ.

ಒಟ್ಟು 541 ಮತಗಳಲ್ಲಿ ಸರಕಾರದ ವಿರುದ್ಧವಾಗಿ 256 ಮತಗಳು ಬಿದ್ದಿದ್ದು, 10 ಮಂದಿ ಸಂಸದರು ಮತದಾನದಲ್ಲಿ ತಟಸ್ಥ ನಿಲುವು ತಳೆದಿದ್ದಾರೆ.

ಸ್ವಯಂಚಾಲಿತ ಯಂತ್ರಗಳ ಮೂಲಕ ಮತ್ತು ಮತಪತ್ರಗಳ ಮೂಲಕ ಮತದಾನ ನಡೆದಿತ್ತು. ಮೊದಲ ಸುತ್ತಿನ ಎಣಿಕೆ ವೇಳೆಗೆ ಸರಕಾರದ ಪರವಾಗಿ 253 ಮತಗಳು ಮತ್ತು ವಿರೋಧವಾಗಿ 232 ಮತ್ತು ಎರಡು ಮಂದಿ ತಟಸ್ಥರಾಗಿ ಉಳಿದಿದ್ದರು.

ಎನ್‌ಡಿಎಯ 12 ಸಂಸದರ ಅಡ್ಡಮತದಾನ ಸರಕಾರದ ಗೆಲುವಿನ ಹಾದಿಯನ್ನು ಸರಾಗವಾಗಿಸಿದೆ ಎಂದು ಮೂಲಗಳು ಹೇಳಿವೆ.

ಇನ್ನು ಸರಕಾರವು ಐಎಇಎಯನ್ನು ಸಂಪರ್ಕಿಸಲಿದ್ದು, ಅಣುಒಪ್ಪಂದದಲ್ಲಿ ಮುಂದುವರಿಯಲಿದೆ ಎಂದು ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ ತಕ್ಷಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸದನದಲ್ಲಿ ನಡೆದ ವಿದ್ಯಮಾನಗಳ ಕುರಿತು ಗಾಢ ದುಃಖವನ್ನು ವ್ಯಕ್ತಪಡಿಸುತ್ತಲೇ ತನ್ನ ಭಾಷಣ ಆರಂಭಿಸಿದ ಪ್ರಧಾನಿ ಮನಮೋಹನ್ ಸಿಂಗ್, ಲಂಚ ಪ್ರಕರಣಕ್ಕೆ ಯಾರು ಜವಾಬ್ದಾರರೋ ಅವರ ವಿರುದ್ಧ ಈ ನೆಲದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಇತ್ತರು.

ಆದರೆ ಪ್ರಧಾನಿಯವರ ಭಾಷಣಕ್ಕೆ ತೀವ್ರ ಅಡ್ಡಿ ಪಡಿಸಿದ ವಿಪಕ್ಷ ಸದಸ್ಯರು, ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ನುಗ್ಗಿ ಗದ್ದಲವೆಬ್ಬಿಸಿದರು. ವಿಶ್ವಾಸ ಮತ ಗಳಿಕೆಗಾಗಿ ಅನೀತಿಯ ಮಾರ್ಗ ಹಿಡಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ತಕ್ಷಣ ತನ್ನ ಸ್ಥಾನ ತ್ಯಜಿಸಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆಯಿಂದಾಗಿ ಭಾಷಣ ಮುಂದುವರಿಸಲಾಗದ ಪ್ರಧಾನಿ ಭಾಷಣದ ಪ್ರತಿಯನ್ನು ಸ್ಪೀಕರ್ ಅವರಿಗೆ ಒಪ್ಪಿಸಿದರು.

ಅಣುಒಪ್ಪಂದದ ಕುರಿತಂತೆ ಯುಪಿಎ ನಿಲುವನ್ನು ವಿರೋಧಿಸಿ, ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಎಡಪಕ್ಷಗಳು ಜೂನ್ 8ರಂದು ತಮ್ಮ ಬೆಂಬಲ ಹಿಂಪಡೆದ ಕಾರಣ ಸರಕಾರವು ಸದನದಲ್ಲಿ ತನ್ನ ವಿಶ್ವಾಸ ಗೊತ್ತುವಳಿ ಮಂಡನೆಯ ಅನಿವಾರ್ಯತೆಗೆ ಸಿಲುಕಿತ್ತು. ಪ್ರಧಾನಿ ಸಿಂಗ್ ಟೋಕಿಯೋದಲ್ಲಿ ಜಿ8 ಸಮ್ಮೇಳನದಲ್ಲಿ ಭಾಗವಹಿಸಿದ್ದ ವೇಳೆ ಅಣುಒಪ್ಪಂದದಲ್ಲಿ ಮುಂದುವರಿಯವುದಾಗಿ ಘೋಷಿಸುತ್ತಿರುವಂತೆಯೇ ಎಡಪಕ್ಷಗಳು ಬೆಂಬಲ ವಾಪಾಸು ಪಡೆದಿದ್ದವು.

ಜಪಾನ್‌ನಿಂದ ಮರಳಿದ ಪ್ರಧಾನಿ ತಕ್ಷಣ ರಾಷ್ಟ್ರಪತಿಯವರನ್ನು ಭೇಟಿಯಾಗಿ ವಿಶ್ವಾಸ ಸಾಬೀತು ಪಡಿಸಲು ಅವಕಾಶ ನೀಡುವಂತೆ ಕೋರಿದ್ದರು.

ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರೂ, ಪ್ರಧಾನಿ ಮನಮೋಹನ್ ಸಿಂಗ್ ಅಣುಒಪ್ಪಂದದಲ್ಲಿ ಮುಂದುವರಿದೇ ಸಿದ್ಧ ಎಂಬ ನಿಲುವಿಗೆ ಅಂಟಿಕೊಂಡಿದ್ದು, ಇದೀಗ ಅವರ ಹಾದಿ ಸರಾಗವಾಗಿದೆ.
ಮತ್ತಷ್ಟು
ಐಬಿಎನ್ ಸ್ಟಿಂಗ್ ಕಾರ್ಯಾಚರಣೆ: ಸ್ಪೀಕರ್‌ಗೆ ಟೇಪು
ಸ್ಪೀಕರ್ ಮುಖದಲ್ಲಿ ನಗು ಮೂಡಿಸಿದ ಲಾಲೂ ಭಾಷಣ
ನೋಟು ಪ್ರದರ್ಶನ: ಪ್ರಜಾಸತ್ತೆಯ ಕರಾಳ ಅಧ್ಯಾಯ
ಲೋಕಸಭೆ ಗದ್ದಲ: ಚಟರ್ಜಿಯ ಕಟು ಗದರಿಕೆ
ಸರಕಾರದಿಂದ ಸಿಬಿಐ ದುರ್ಬಳಕೆ: ಬಿಎಸ್‌ಪಿ ಆರೋಪ
ಕೊನೆ ಕ್ಷಣದ ಬಲಾಬಲ ಇಂತಿದೆ