ಮಂಗಳವಾರ ಲೋಕಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಉರುಳಿಸಲು ವಿಫಲಗೊಂಡ ನಂತರ, ಭವಿಷ್ಯದ ಹಾದಿಯ ಬಗ್ಗೆ ರೂಪುರೇಷೆಯನ್ನು ರಚಿಸಲು ಎಡಪಕ್ಷಗಳ ನಾಯಕರು, ಬಹುಜನ ಸಮಾಜವಾದಿ ಪಕ್ಷ ಮತ್ತು ಯುನೈಟೆಡ್ ನ್ಯಾಶನಲ್ ಪ್ರೋಗ್ರೆಸಿವ್ ಅಲಾಯನ್ಸ್(ಯುಎನ್‌ಪಿಎ) ಪಕ್ಷಗಳು ನವದೆಹಲಿಯಲ್ಲಿ ಸಭೆ ನಡೆಸಿದವು.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಎ.ಬಿ.ಬರ್ದನ್ ಮತ್ತು ಡಿ.ರಾಜ, ಜನತಾದಳದ ಎಚ್.ಡಿ.ದೇವೇಗೌಡ, ಫಾರ್ವರ್ಡ್ ಬ್ಲಾಕ್‌ನ ಜಿ.ದೇವರಾಜನ್, ಆರ್ಎಸ್‌ಪಿಯ ಅಬಾನಿ ರಾಯ್, ಆರ್ಎಲ್‌ಡಿಯ ಮುಖ್ಯಸ್ಥ ಅಜಿತ್ ಸಿಂಗ್, ಟಿಡಿಪಿಯ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಟಿಆರ್ಎಸ್‌ನ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್, ಇಂಡಿಯನ್ ನ್ಯಾಶನಲ್ ಲೋಕದಳದ ನಾಯಕ ಅಜಯ್ ಚೌತಾಲ ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾ ನಾಯಕ ಬಾಬುಲಾಲ್ ಮಾರಂಡಿ ಭಾಗವಹಿಸಿದ್ದರು.
ಪೂರ್ವನಿಗದಿತ ಇತರ ಕಾರ್ಯಗಳ ನಿಮಿತ್ತ ಸಭೆಯಿಂದ ಮಧ್ಯದಲ್ಲೇ ತೆರಳಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕದಲ್ಲಿ ತೃತೀಯ ರಂಗವನ್ನು ಬಲಪಡಿಸಲು ಜೆಡಿ(ಎಸ್) ಪ್ರಯತ್ನಿಸುತ್ತದೆ ಎಂದು ವರದಿಗಾರರಿಗೆ ತಿಳಿಸಿದರು.
ಮುಂಬರುವ ದಿನಗಳಲ್ಲಿ ತೆಲುಗು ರಾಷ್ಟ್ರ ಸಮಿತಿಯು ಬಹುಜನ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಲಿದೆ ಎಂದು ಟಿಆರ್ಎಸ್‌ನ ಮುಖ್ಯಸ್ಥ ಚಂದ್ರಶೇಖರ್ ರಾವ್ ಇದೇ ವೇಳೆ ತಿಳಿಸಿದ್ದು, ಉಭಯ ಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದರು.
|