ಅಡ್ಡ ಮತದಾನ ಮತ್ತು ವಿಶ್ವಾಸಮತದ ವೇಳೆ ಗೈರುಹಾಜರಾಗಿ, ಯುಪಿಎಯ ವಿಜಯಕ್ಕೆ ಕಾರಣರಾದ ಸಂಸದರಿಗೆ ಕಷ್ಟ ಕಾಲ ಆರಂಭವಾಗಿದ್ದು, ಒರಿಸ್ಸಾದ ಬಿಜು ಜನತಾ ದಳವು ಒಬ್ಬ ಸಂಸದನನ್ನು ಪಕ್ಷದಿಂದ ಉಚ್ಚಾಟಿಸಿದೆ.
ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಬಿಜೆಡಿ ಸಂಸದ ಹರಿಹರ ಸ್ವೇನ್ ಅವರನ್ನು ಪಕ್ಷದ ಸಚೇತಕಾಜ್ಞೆ ಉಲ್ಲಂಘಿಸಿ ಯುಪಿಎ ಪರವಾಗಿ ವಿಶ್ವಾಸ ಮತ ಚಲಾಯಿಸಿದ ಕಾರಣಕ್ಕೆ ಉಚ್ಚಾಟಿಸಿರುವ ಬಿಜೆಡಿ ಮುಖ್ಯಸ್ಥ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಸ್ವೇನ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ನಿಟ್ಟಿನಲ್ಲಿ ಕ್ರಮ ಆರಂಭಿಸಲಾಗಿದೆ ಎಂದಿದ್ದಾರೆ.
ಕರ್ನಾಟಕದ ನಾಲ್ಕು ಮಂದಿ (ಬಿಜೆಪಿಯ ಮನೋರಮಾ ಮಧ್ವರಾಜ್, ಮಂಜುನಾಥ್ ಕುನ್ನೂರ್, ಎಚ್.ಟಿ.ಸಾಂಗ್ಲಿಯಾನಾ ಹಾಗೂ ಜೆಡಿಎಸ್‌ನ ಶಿವಣ್ಣ) ಅವರೂ ಕ್ರಮ ಎದುರಿಸುವ ಹಂತದಲ್ಲಿದ್ದಾರೆ. ಮತ್ತೊಬ್ಬ ಬಿಜೆಪಿ ಸಂಸದ, ಡಿ.ಸಿ.ಶ್ರೀಕಂಠಪ್ಪ ಅನಾರೋಗ್ಯದಿಂದ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.
ಟಿಡಿಪಿಯ ಮದ್ಯದ ದೊರೆ, ಸಂಸದ ಟಿ.ಆರ್.ಆದಿಕೇಶವುಲು ಮತ್ತು ಎಂ.ಜಗನ್ನಾಥಂ ಅವರೂ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಪರ ಮತ ಚಲಾಯಿಸಿದ್ದು, ಅವರ ವಿರುದ್ಧವೂ ಶಿಸ್ತುಕ್ರಮ ಆರಂಭಿಸಲಾಗಿದೆ ಎಂದು ಟಿಡಿಪಿ ನಾಯಕ ಕೆ.ಯೆರ್ರಂ ನಾಯ್ಡು ತಿಳಿಸಿದ್ದಾರೆ.
ಮತದಾನಕ್ಕೆ ಗೈರು ಹಾಜರಾದ ಶಿರೋಮಣಿ ಅಕಾಲಿ ದಳದ ಸುಖದೇವ್ ಸಿಂಗ್ ಲಿಬ್ರಾ ಅವರಿಂದ ವಿವರಣೆ ಕೋರಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಲ್‌ಜಿತ್ ಸಿಂಗ್ ಚೀಮಾ ತಿಳಿಸಿದ್ದಾರೆ.
ವಿಶ್ವಾಸ ಗೊತ್ತುವಳಿಯ ಮತದಾನ ಸಂದರ್ಭ ಪ್ರತಿಪಕ್ಷಗಳ ಕಡೆಯಿಂದ ಬಿಜೆಪಿಯ ಐವರು ಸೇರಿದಂತೆ 15 ಸಂಸದರು ಸರಕಾರದ ಪರವಾಗಿ ಮತ ಚಲಾಯಿಸಿದ್ದರೆ, ಬಿಜೆಪಿಯ ನಾಲ್ವರು ಸೇರಿ 9 ಮಂದಿ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ ಇಲ್ಲವೇ ಗೈರು ಹಾಜರಾಗಿದ್ದರು.
ಇವರೆಲ್ಲರೂ ಪಕ್ಷದ ವಿಪ್ ಅನುಸಾರ ಮತ ಚಲಾಯಿಸಿದ್ದಿದ್ದರೆ ಯುಪಿಎ ಪರವಾಗಿ ಕೇವಲ 251 ಹಾಗೂ ಯುಪಿಎ ವಿರುದ್ಧ 280 ಮತಗಳು ಬೀಳುತ್ತಿದ್ದವು ಮತ್ತು ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
|