ಅಡ್ಡ ಮತದಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಬಿಜೆಪಿಯು, ಸಚೇತಕಾಜ್ಞೆಯನ್ನು ಉಲ್ಲಂಘಿಸಿ ಯುಪಿಎ ಪರ ಮತಚಲಾಯಿಸಿರುವ ಅಥವಾ ಮತದಾನದಿಂದ ದೂರ ಉಳಿದಿರುವ ತನ್ನ ಎಂಟು ಸಂಸದರನ್ನು ಪಕ್ಷದಿಂದ ಉಚ್ಚಾಟಿಸಿದೆ.
ಸಂಸದರಾದ ಎಚ್.ಚಿ. ಸಾಂಗ್ಲಿಯಾನ (ಬೆಂಗಳೂರು ಉತ್ತರ), ಸೋಂಭಾಯ್ ಪಟೇಲ್(ಸುರೇಂದ್ರ ನಗರ), ಕೆ.ಮಂಜುನಾಥ (ಧಾರವಾಡ-ಕುನ್ನೂರು), ಬ್ರಿಜ್ ಭೂಷಣ್ ಶರಣ್ ಸಿಂಗ್ (ಬಲರಾಂ ಪುರ), ಚಂದ್ರಾಭಾನ್ ಸಿಂಗ್ (ದಾಮೊರ್), ಮನೋರಮಾ ಮಧ್ವರಾಜ್ (ಉಡುಪಿ), ಬಾಬುಭಾಯ್ ಖತಾರ (ದೋಹಾದ್), ಹರಿಭವ ಮಾಧವ (ಜಲ್ಗಾಂವ್) ಪಕ್ಷದ ನೀತಿನಿಯಮಗಳನ್ನು ತೂರಿ ಪಕ್ಷಕ್ಕೆ ವಂಚನೆ ಎಸಗಿದ್ದು, ಪಕ್ಷದಿಂದ ಹೊರದಬ್ಬಿಸಿಕೊಂಡಿದ್ದಾರೆ.
ಉಚ್ಚಾಟಿತರಲ್ಲಿ ನಾಲ್ವರು ಯುಪಿಎ ಪರ ಮತಚಲಾಯಿಸಿದ್ದರೆ, ಉಳಿದ ನಾಲ್ವರು ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಘೋಷಿಸಿದ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಯುಪಿಎಯ ವಿಶ್ವಾಸಮತ ಗೆಲವು 'ಕಳಂಕಿತ' ಎಂದು ವ್ಯಾಖ್ಯಾನಿಸಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ನಡೆದ ವಿಶ್ವಾಸ ಮತದಾನದ ವೇಳೆಗೆ ಸಂಸತ್ ಭವನದ ಕ್ಯಾಂಟೀನಿನಲ್ಲಿ ಚಹಪಾನದಲ್ಲಿ ನಿರತರಾಗಿದ್ದ ಕೆಲವು ಸಂಸದರು ಮತದಾನದ ಗಂಟೆ ಬಾರಿಸಿದರೂ ತಮ್ಮ ಸ್ಥಾನಕ್ಕೆ ತೆರಳಿರಲಿಲ್ಲ.
ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿ ಕೆಲವು ಸದಸ್ಯರು ಅಡ್ಡ ಮತದಾನ ಮಾಡಿರುವುದು ಆಘಾತ ನೀಡಿದೆ ಎಂದು ಬಿಜೆಪಿ ಪಕ್ಷದ ಹಿರಿಯ ಸದಸ್ಯರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
|