ಲೋಕಸಭೆಯಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಎಡಪಕ್ಷಗಳ ವಿರುದ್ಧ ದಾಳಿ ನಡೆಸಲು ಮನಮೋಹನ್ ಸಿಂಗ್ ಅವರು 'ಜೀತದಾಳು' ಎಂಬಂತಹ ಪದಗಳನ್ನು ಬಳಸಿರುವಬಗ್ಗೆ ಪ್ರಧಾನಮಂತ್ರಿಯ ವಿರುದ್ಧ ಸಿಪಿಎಂ ಹರಿಹಾಯ್ದಿದ್ದು, ಸಂಸತ್ತಿನಲ್ಲಿ ಮನಮೋಹನ್ ಸಿಂಗ್ ಅವರ ಈ ಹೇಳಿಕೆಯು ಪ್ರಧಾನಿ ಕಚೇರಿಯ ಘನತೆಯನ್ನು ಪ್ರಶ್ನಾರ್ಹವಾಗಿಸಿದೆ ಎಂದು ಹೇಳಿದೆ.
ತನಗೆ ಬೇಕಾದ ಪದಗಳನ್ನು ಪ್ರಧಾನಮಂತ್ರಿಯವರು ಮುಕ್ತವಾಗಿ ಉಪಯೋಗಿಸಬಹುದು. ಆದರೆ, ಪ್ರಧಾನಿಯ ಪಟ್ಟದಲ್ಲಿದ್ದುಕೊಂಡು ಮನಮೋಹನ್ ಸಿಂಗ್ ಇಂತಹ ನೀಚ ಪದಗಳನ್ನು ಬಳಸುವುದು ಎಷ್ಟು ಸಮಂಜಸ ಎಂದು ಸಿಪಿಎಂ ಪೊಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಪ್ರಶ್ನಿಸಿದ್ದಾರೆ. ಅವರು ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದರು.
ಎಡಪಕ್ಷಗಳ ಬೆಂಬಲವಿಲ್ಲದೆ ಮನಮೋಹನ್ ಸಿಂಗ್ ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಎಡಪಕ್ಷಗಳ ಬೆಂಬಲವನ್ನು ಪಡೆದುಕೊಂಡು ಹುದ್ದೆಗೇರಿರುವ ಅವರು ಈ ರೀತಿ ಯಾಕೆ ಹೇಳಿದ್ದಾರೆ ಎಂಬುದಾಗಿ ಅವರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯವರ ತಪ್ಪು ಲೆಕ್ಕಾಚಾರವನ್ನು ಸಿಪಿಎಂ ಮತ್ತೊಮ್ಮೆ ಪರಿಶೀಲಿಸಬೇಕು ಎಂಬ ಸಿಂಗ್ ಅವರ ಹೇಳಿಕೆಯನ್ನು ಟೀಕಿಸಿದ ಅವರು, ಇತರ ಪಕ್ಷಗಳಿಗೆ ಹೋಲಿಸಿದರೆ, ಸಿಪಿಎಂ ಪಕ್ಷವು ವಿಭಿನ್ನ ರಾಜಕೀಯ ಸಂಸ್ಕೃತಿಯನ್ನು ಹೊಂದಿದೆ ಎಂಬ ತಿರುಗೇಟು ನೀಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ನಿಲುವು ಪಾಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿಯಿಂದ ನಿರ್ಧಾರಗೊಂಡದ್ದಾಗಿದೆ. ಸಿಪಿಎಂ ಪಕ್ಷದ ಪ್ರತಿ ವ್ಯಕ್ತಿಯ ಪಾತ್ರವು ಪ್ರಜಾಪ್ರಬಭುತ್ವ ಸಂಸ್ಕೃತಿಯಿಂದ ಬಲಗೊಂಡಿದ್ದು, ಇದು ಸಾಮೂಹಿಕವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|