ಲೋಕಸಭಾ ಸ್ಪೀಕರ್ ಆಗಿ ಮುಂದುವರಿಯುವ ಮತ್ತು ಜುಲೈ 22ರಂದು ನಡೆದ ವಿಶ್ವಾಸಮತಯಾಚನೆಯ ವೇಳೆಗೆ ಲೋಕಸಭೆಯ ಅಧ್ಯಕ್ಷತೆ ವಹಿಸುವ ಹಠಮಾರಿತನ ತೋರಿದ ಸೋಮನಾಥ ಚಟರ್ಜಿ ವಿರುದ್ಧ ಕ್ರಮಕೈಗೊಂಡಿರುವ ಸಿಪಿಐ- ಎಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
ಸಿಪಿಐ-ಎಂ ನ ಪಾಲಿಟ್‌ಬ್ಯೂರೋ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಲೋಕಸಭೆಯಲ್ಲಿ ಇತರ ವಿರೋಧ ಪಕ್ಷಗಳೊಂದಿಗೆ ಆಡಳಿತಾರೂಢ ಯುಪಿಎಯನ್ನು ಸೋಲಿಸಲು ವಿಫಲವಾಗಿರುವ ಒಂದು ದಿನದ ಬಳಿಕ ಪಕ್ಷ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಯುಪಿಎ ಸರಕಾರಕ್ಕೆ ಪಕ್ಷ ನೀಡಿದ್ದ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಪಕ್ಷವು ಚಟರ್ಜಿ ಮೇಲೆ ಒತ್ತಡ ಹೇರಿತ್ತು. ಆದರೆ ಈ ಸಾಂವಿಧಾನಿಕ ಹುದ್ದೆಯು ರಾಜಕೀಯಾತೀತವಾದದ್ದು ಎಂದು ಹೇಳಿದ್ದ ಚಟರ್ಜಿ ಹುದ್ದೆ ತೊರೆಯಲು ನಿರಾಕರಿಸಿದ್ದರು.
ಮತದಾನದ ಬಳಿಕ ಬುಧವಾರ ತಾನು ಈ ಸಾಂವಿಧಾನಿಕ ಹುದ್ದೆಯಿಂದ ಸದ್ಯಕ್ಕೆ ಕೆಳಗಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾನು ಹುದ್ದೆಯಲ್ಲಿ ಮುಂದುವರಿಯಲು ಇಚ್ಚಿಸುವುದಾಗಿ ಅವರು ಪಶ್ಚಿಮ ಬಂಗಾಳದ ಎಡರಂಗ ಅಧ್ಯಕ್ಷ ಬಿಮನ್ ಬೋಸ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಪದತ್ಯಾಗಕ್ಕೆ ಒತ್ತಡ ಹೇರಿದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಯುಪಿಎ ಸರಕಾರದಿಂದ ಬೆಂಬಲ ಹಿಂತೆಗೆದುಕೊಂಡ ಸಂಸದರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಿರುವುದಕ್ಕೆ ಚಟರ್ಜಿ ಆಕ್ರೋಶಗೊಂಡಿದ್ದರು. ತಾನು ಸ್ಪೀಕರ್ ಆಗಿರುವ ತನಕ ತನ್ನನ್ನು ಪಕ್ಷ ರಾಜಕೀಯದಿಂದ ದೂರ ಇರಿಸಬೇಕು ಎಂಬುದು ಚಟರ್ಜಿ ನಿಲುವಾಗಿದೆ.
ಇದಲ್ಲದೆ ಬಿಜೆಪಿಯೊಂದಿಗೆ ಯುಪಿಎ ಸರಕಾರದ ವಿರುದ್ಧ ಮತಚಲಾಯಿಸಲು ತಾನು ಇಚ್ಚಿಸುವುದಿಲ್ಲ ಎಂದೂ ಅವರು ಹೇಳಿದ್ದರು. ತಾನು ಪಾಲಿಟ್‌ಬ್ಯೂರೋ ಸದಸ್ಯನಲ್ಲದ ಕಾರಣ ಪಕ್ಷವು ತನ್ನ ವಿರುದ್ಧ ನೋಟೀಸ್ ನೀಡದು ಎಂದವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅಭಿಪ್ರಾಯಿಸಿದ್ದರು.
|