ಸಂಸತ್‌ನಲ್ಲಿ ಮಂಗಳವಾರ ನಡೆದ ವಿಶ್ವಾಸಮತದ ಸಂದರ್ಭದಲ್ಲಿ ಯುಪಿಎ ಪರ ಮತ ಚಲಾಯಿಸಿದ ಜೆಡಿಎಸ್‌ನ ಸಂಸದ ಶಿವಣ್ಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ತಿಳಿಸಿದ್ದಾರೆ.
ಬುಧವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡಮತದ ಚಲಾವಣೆಯೇ ಶಿವಣ್ಣ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾರಣ ಎಂದು ಹೇಳಿದರು. ಪಕ್ಷದ ನಿರ್ಣಯದ ವಿರುದ್ಧವಾಗಿ ಶಿವಣ್ಣ ಅವರು ಮತ ಚಲಾಯಿಸಿದ್ದಾರೆ ಎಂದು ದೇವೇಗೌಡ ದೂರಿದರು.
ಶಿವಣ್ಣ ಅವರ ಉಚ್ಚಾಟನೆಯಿಂದಾಗಿ ಪಕ್ಷಕ್ಕೆ ಯಾವುದೇ ತೆರನಾದ ನಷ್ಟವಿಲ್ಲ, ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬುದು ತನಗೆ ತಿಳಿದಿದೆ ಎಂದರು. ಅಣು ಒಪ್ಪಂದದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೆ, ಅಲ್ಲದೇ ತಾನು ಅಣು ಒಪ್ಪಂದದ ಪರ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
|