ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಲೋಕಸಭೆಯ ಸ್ಪೀಕರ್ ಸೋಮನಾಥ್ ಚಟರ್ಜಿ ಅವರನ್ನು ಮಾರ್ಕ್ಸಿಸ್ಟರು ಸಿಪಿಎಂನಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಚಟರ್ಜಿ ಅವರಿಗೆ ಯುಪಿಎ ಸಂಪೂರ್ಣ ಬೆಂಬಲದ ಭರವಸೆ ನೀಡಿದೆ.
ಗುರುವಾರ ಮುಂಜಾನೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸ್ಪೀಕರ್ ಚಟರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಸಮ್ಮಿಶ್ರ ಸರಕಾರ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಪ್ರಧಾನಿ ಚಟರ್ಜಿ ಅವರಿಗೆ ಆಶ್ವಾಸನೆಯನ್ನು ನೀಡಿದ್ದಾರೆ.
ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಚಟರ್ಜಿ ಮತ್ತು ಪ್ರಧಾನಿ ನಡುವಿನ ಮಾತುಕತೆಯಲ್ಲಿ, ಲೋಕಸಭೆಯಲ್ಲಿ ಅಧಿವೇಶನದ ವೇಳೆ ಸದನದಲ್ಲಿ ಸ್ಪೀಕರ್ ಅವರ ಕಾರ್ಯನಿರ್ವಹಣೆಯನ್ನು ಪ್ರಧಾನಿ ಶ್ಲಾಘಿಸಿರುವುದಾಗಿ ತಿಳಿದುಬಂದಿದೆ.
ಚಟರ್ಜಿ ಅವರು ಸಂಪೂರ್ಣ ಸದನದ ಬೆಂಬಲವನ್ನು ಹೊಂದಿದ್ದಾರೆ ಎಂದು ಸಭೆಯ ನಂತರ ಹಿರಿಯ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಚಟರ್ಜಿ ಅವರು ಸ್ಪೀಕರ್ ಸ್ಥಾನದಿಂದ ಬದಲಾವಣೆ ಹೊಂದುವುದಿಲ್ಲ. ಯುಪಿಎ ಬೆಂಬಲದೊಂದಿಗೆ ಸ್ಪೀಕರ್ ಆಗಿಯೇ ಮುಂದುವರಿಯಲಿದ್ದಾರೆ ಎಂದು ಪಾಸ್ವಾಸ್ ಸ್ಪಷ್ಟಪಡಿಸಿದ್ದಾರೆ.
|