ಲೋಕಸಭೆಯಲ್ಲಿನ 'ಓಟಿಗಾಗಿ ನೋಟು' ಪ್ರಕರಣವು ವ್ಯವಸ್ಥಿತ ವಂಚನೆ ಎಂಬ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್, ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವ ದೇಗುಲದಲ್ಲಿ ರಾಜಕೀಯ ಭಯೋತ್ಪಾದನೆ ನಡೆದಿದೆ ಎಂದು ಆರೋಪಿಸಿದೆ.
ರಹಸ್ಯವಾಗಿ ಲೋಕಸಭೆಯೊಳಗೆ ಕರೆನ್ಸಿ ನೋಟುಗಳನ್ನು ತರುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವ ದೇವಾಲಯವನ್ನು ಅಪವಿತ್ರಗೊಳಿಸಿದ್ದು, ಸಂಸತ್ತಿನ ನಂಬಿಕೆಯನ್ನು ನಾಶಮಾಡಲು ನೀಚ ರಾಜಕೀಯ ಭಯೋತ್ಪಾದನೆಯನ್ನು ನಡೆಸಿದೆ ಎಂದು ಎಐಸಿಸಿ ವಕ್ತಾರೆ ಜಯಂತಿ ನಟರಾಜನ್ ಆರೋಪಿಸಿದ್ದಾರೆ.
ಸರಕಾರದ ವಿಶ್ವಾಸಮತ ಗೊತ್ತುವಳಿಯಲ್ಲಿ ಯುಪಿಎ ಪರ ಮತಹಾಕುವಂತೆ ಒತ್ತಾಯಿಸಿ ಎಸ್‌ಪಿ ಪಕ್ಷವು ತಮಗೆ ಮೂರು ಕೋಟಿ ನೀಡಿರುವುದಾಗಿ ಬಿಜೆಪಿಯ ಮೂರು ಸಂಸದರು ಹಣದ ಕಂತೆಯೊಂದಿಗೆ ಬಂದು ಸಂಸತ್ತಿನಲ್ಲಿ ಆರೋಪಿಸಿರುವ ಬಗ್ಗೆ ಜಯಂತಿ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
1991ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ಬಿಜೆಪಿಯು ಮತೀಯ ಭಯೋತ್ಪಾದನೆಯನ್ನು ನಡೆಸಿದ್ದು, ದೇಶದ ಜಾತ್ಯತೀತ ಚೌಕಟ್ಟನ್ನು ಮುರಿದಿದೆ ಎಂದು ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ.
|