ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರ ಉಚ್ಚಾಟನೆಯ ಕುರಿತಾಗಿ ಪಕ್ಷವು ಕೈಗೊಂಡ ನಿರ್ಧಾರದ ಬಗ್ಗೆ ದೇಶಾದ್ಯಂತ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಿರ್ಧಾರ ಸಮರ್ಥಿಸಿಕೊಂಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಪಕ್ಷದ ಕಾನೂನು ಉಲ್ಲಂಘಿಸಿದಕ್ಕಾಗಿ ಮಾರ್ಕ್ಸಿಸ್ಟ್ ನಾಯಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೆ ಬೇರೆ ವಿಧಿ ಇರಲಿಲ್ಲ ಎಂದು ಹೇಳಿದ್ದಾರೆ.
ಚಟರ್ಜಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕುರಿತಾಗಿ ಈ ನಿರ್ಧಾರವು ಅನಿವಾರ್ಯ ಮತ್ತು ದುರದೃಷ್ಟಕರ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕಾರಟ್, ಇದು ಸಂತೋಷದ ವಿಚಾರವೂ ಅಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
ಪಕ್ಷವು ಬೆಂಬಲ ಹಿಂತೆಗೆದುಕೊಂಡ ನಂತರ, ಪಕ್ಷದ ಯಾವುದೇ ಸದಸ್ಯ ಕೂಡಾ ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನದಲ್ಲಿರಕೂಡದು ಎಂಬುದಾಗಿ ಪಕ್ಷದ ಕೇಂದ್ರ ಸಮಿತಿಯು ನಿರ್ಧರಿಸಿತ್ತು. ಕೇಂದ್ರ ಸಮಿತಿಯ ಈ ನಿರ್ಧಾರವನ್ನು ಪಾಲಿಸುವಂತೆಯೂ ಸೂಚನೆ ನೀಡಲಾಗಿತ್ತು. ಆದರೆ, ಚಟರ್ಜಿ ಅವರು ಇದಕ್ಕೆ ಸಮ್ಮತಿಸದ ಕಾರಣ, ಪಕ್ಷವು ಉಚ್ಚಾಟನೆಯ ನಿರ್ಧಾರವನ್ನು ಕೈಗೊಳ್ಳಬೇಕಾಯಿತು ಎಂದು ಕಾರಟ್ ಹೇಳಿದ್ದಾರೆ.
ಯುಪಿಎ ಸರಕಾರದಿಂದ ಎಡಪಕ್ಷಗಳು ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡ ನಂತರ, ಸ್ಪೀಕರ್ ಸ್ಥಾನವನ್ನು ತ್ಯಜಿಸುವಂತೆ ಸಿಪಿಎಂ ಚಟರ್ಜಿ ಅವರಿಗೆ ಮನವಿ ಮಾಡಿತ್ತು. ಆದರೆ, ರಾಜೀನಾಮೆಗೆ ಚಟರ್ಜಿ ನಿರಾಕರಿಸಿದ್ದರು.
|