ವಿಶ್ವಾಸಮತದ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಪರ ಮತ ಚಲಾಯಿಸಿದ ಜೆಡಿ(ಯು) ಮತ್ತು ಎಂಡಿಎಂಕೆ ಸಂಸದರನ್ನು ಎರಡೂ ಪಕ್ಷಗಳು ಪಕ್ಷದಿಂದ ಗುರುವಾರ ಉಚ್ಛಾಟಿಸಿದೆ.
ಬಿಹಾರದಲ್ಲಿನ ನಾಲಂದಾದ ಸಂಸದ ರಾಮಸ್ವರೂಪ್ ಪ್ರಸಾದ್ ಅವರನ್ನು ಯುಪಿಎ ಪರ ಮತ ಹಾಕಿದ ಕಾರಣಕ್ಕಾಗಿ ಪಕ್ಷದಿಂದ ಉಚ್ಛಾಟಿಸಲಾದರೆ, ಲಕ್ಷ್ಯದ್ವೀಪದ ಸಂಸದ ಪಿ.ಪಿ.ಕೋಯಾ ಅವರನ್ನು ಮತದಾನದ ವೇಳೆ ಗೈರುಹಾಜರಾದ ಆರೋಪದಲ್ಲಿ ಪಕ್ಷದಿಂದ ಪದಚ್ಯುತಗೊಳಿಸಲಾಗಿದೆ.
ಶರದ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ ವಿಶ್ವಾಸ ಗೊತ್ತುವಳಿಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಪರ ಮತ ಹಾಕಿರುವ ಎಂಡಿಎಂಕೆ ಪಕ್ಷದ ಸಂಸದರಾದ ಎಲ್.ಗಣೇಶನ್ ಮತ್ತು ಎನ್.ರಾಮಚಂದ್ರನ್ ಅವರನ್ನು ಎಂಡಿಎಂಕೆ ಪಕ್ಷದಿಂದ ಉಚ್ಚಾಟಿಸಿದೆ.
ಪಕ್ಷ ವಿರೋಧಿ ಕಾರ್ಯಗಳಿಗಾಗಿ ಈ ಎರಡೂ ಸಂಸದರನ್ನು ಪಕ್ಷದಿಂದ ಪದಚ್ಯುತಗೊಳಿಸಲಾಗಿದೆ ಎಂದು ಪಕ್ಷದ ಮುಖ್ಯಸ್ಥ ವೈಕೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
|