ನವದೆಹಲಿ: ವಿಶ್ವಾಸಮತದಿಂದಾಗಿ ಪರಸ್ಪರ ವಿಶ್ವಾಸ ಹೆಚ್ಚಿಸಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಗಳನ್ನು ಒಟ್ಟಾಗಿ ಎದುರಿಸುವ ಸಿದ್ಧತೆಗಳು ಆರಂಭಗೊಂಡಿವೆ. ಸಮಾಜವಾದಿ ಪಕ್ಷದ ಮುಖ್ಯ ಕಾರ್ಯದರ್ಶಿ ಅಮರ್ ಸಿಂಗ್ ಈಗಾಗಲೆ ಉತ್ತರ ಪ್ರದೇಶ ಮತ್ತು ಸದ್ಯದಲ್ಲೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಸಂಬಂಧಪಟ್ಟಂತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ನವೆಂಬರ್ - ಡಿಸೆಂಬರ್‌ನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದಲ್ಲಿ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ ಅನಧಿಕೃತ ಮಾತುಕತೆಗಳು ಈಗಾಗಲೆ ನಡೆದಿವೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ. ಮಧ್ಯ ಪ್ರದೇಶದ 2003 ರ ವಿಧಾನ ಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಏಳು ಸ್ಥಾನ ಗಳಿಸಿತ್ತು.
ಇದೇ ವೇಳೆ ಕಾಂಗ್ರೆಸ್, ಬಿಜೆಪಿಯ ಅಲೆಯ ಮುಂದೆ ತೀರಾ ಮಂಕಾಗಿ ಒಟ್ಟು 230 ಕ್ಷೇತ್ರಗಳಲ್ಲಿ ಕೇವಲ 38 ಸ್ಥಾನಗಳನ್ನು ಜಯಿಸಿತ್ತು. ಇಲ್ಲಿ ಕಾಂಗ್ರೆಸ್ ಧೂಳಿನಿಂದ ಎದ್ದು ಬರಬೇಕಾಗಿರುವುದರಿಂದ ಎಸ್ಪಿಯ ಈ ಮೈತ್ರಿ ಪ್ರಸ್ತಾಪ ಅದರ ಪ್ರಯತ್ನಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ ಎಂದು ನಂಬಲಾಗಿದೆ.
ಎಸ್ಪಿ ಮತ್ತು ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಒಟ್ಟಾಗಿ ಚುನಾವಣೆಗೆ ಹೋದರೆ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಬಹುದು ಮತ್ತು ಎಸ್ಪಿಗೆ ಈ ರಾಜ್ಯದಲ್ಲಿ ತಮ್ಮ ಬೇರನ್ನು ಇನ್ನೂ ವಿಸ್ತಾರವಾಗಿ ಹರವಲು ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ.
|