ಯುಪಿಎಯೊಂದಿಗಿನ ಎಡಪಕ್ಷಗಳ ವಿಚ್ಛೇದನವು ದೇಶದಾದ್ಯಂತ ಗಮನ ಸೆಳೆದಿರುವ ಹೊರತಾಗಿಯೂ, ಎಡಪಕ್ಷಗಳೊಂದಿಗೆ ಯಾವುದೇ ಕಹಿ ಭಾವನೆ ಇಲ್ಲ ಎಂಬುದಾಗಿ ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದು, ಈ ಬೆಳವಣಿಗೆಯು ದುಃಖಕಾರಿಯಾಗಿದೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮತ್ತೆ ಕೈಜೋಡಿಸುವ ಸಾಧ್ಯತೆಯ ಕುರಿದಾಗಿ ಕೇಳಲಾದ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿದ ಅವರು, ರಾಜಕೀಯ ಜ್ಯೋತಿಷಿಯಾಗಲು ತಾನು ಬಯಸುವುದಿಲ್ಲ ಎಂದು ನುಡಿದರು.
ಎಡಪಕ್ಷಗಳ ನಿಲುವಿನ ಕುರಿತಾಗಿ ಬೇಸರವಿದೆ ಆದರೆ, ಎಡಪಕ್ಷಗಳ ಬಗ್ಗೆ ಯಾವುದೇ ಕಹಿ ಭಾವನೆಯನ್ನು ಹೊಂದಿಲ್ಲ ಎಂದು ಪ್ರಣಬ್ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಸತ್ಯವಾಗಿ ಹೇಳುವುದಾದರೂ, ಎಡಪಕ್ಷಗಳೊಂದಿಗೆ ಅಸಹನೆಯನ್ನು ಹೊಂದಿಲ್ಲ, ಎಡಪಕ್ಷಗಳ ನಾಯಕರು ಕೂಡಾ ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿಲ್ಲ" ಎಂದು ಮುಖರ್ಜಿ ಹೇಳಿದ್ದಾರೆ.
ಮುಂದಿನ ಚುನಾವಣೆಯ ನಂತರ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಕಾರ್ಯವ್ಯವಹಾರಗಳನ್ನು ನಡೆಸುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಅದನ್ನು ಈಗ ಹೇಗೆ ಹೇಳಲು ಸಾಧ್ಯ? ಪರಿಸ್ಥಿತಿ ಯಾವ ರೀತಿ ಬದಲಾಗುತ್ತದೆ ಎಂಬುದಾಗಿ ಸ್ವಲ್ಪ ದಿನ ಕಾಯೋಣ. ಯಾವುದೇ ಭವಿಷ್ಯ ನುಡಿಯುವುದು ಬೇಡ, ರಾಜಕೀಯ ಜ್ಯೋತಿಷಿಗಳಾಗುವುದೂ ಬೇಡ" ಎಂದರು.
|