ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಘಟನೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರವಾಗಿ ಖಂಡಿಸಿದ್ದು, ಇದೊಂದು ವ್ಯವಸ್ಥಿತ ಸಂಚು ಎಂಬುದಾಗಿ ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿನ ಶಾಂತಿಯುತವಾದ ವಾತಾವರಣವನ್ನು ಹದಗೆಡಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಸಂಚನ್ನು ದುಷ್ಕರ್ಮಿಗಳು ನಡೆಸಿದ್ದು, ಜನರನ್ನು ಹಾದಿ ತಪ್ಪಿಸುವ ತಂತ್ರವಾಗಿ ಎಂದು ದೂರಿದ ಯಡಿಯೂರಪ್ಪ, ಇದರಿಂದ ಜನರು ಗಾಬರಿಗೊಳ್ಳಬೇಕಾಗಿಲ್ಲ. ಇದೊಂದು ವ್ಯವಸ್ಥಿತ ಸಂಚು. ಆ ನಿಟ್ಟಿನಲ್ಲಿ ಜನರು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ತಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.
ಪರಿಹಾರ ಘೋಷಣೆ: ಎಂಟು ಸ್ಥಳಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಲಕ್ಷ್ಮಿ, ಮುನಿಯಪ್ಪ ಸೇರಿದಂತೆ ಇಬ್ಬರು ಬಲಿಯಾಗಿದ್ದು, ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ಖಂಡನೆ: ಸರಣಿ ಬಾಂಬ್ ಸ್ಫೋಟ ಘಟನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಖಂಡಿಸಿದ್ದು, ಜನರು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.
ತಲ್ಲಣಗೊಂಡ ಉದ್ಯಾನನಗರಿ: ಮಧ್ನಾಹ್ನ 1.20ರ ಸುಮಾರಿಗೆ ಮೊದಲಿಗೆ ಮಡಿವಾಳ ಬಸ್‌ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿತ್ತು. ಬಳಿಕ 15ನಿಮಿಷಗಳ ಅಂತರದಲ್ಲಿ ಸರಣಿಯಾಗಿ ಎಂಟು ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಿಂದ ಜನರು ದಿಕ್ಕಾಪಾಲಾಗಿ ಓಡಿದರಲ್ಲದೇ, ಜನರಲ್ಲಿ ಆತಂಕದ ವಾತಾವರಣ ಮೂಡಿಸಿತ್ತು.
ಕೆಲ ಹೊತ್ತಿನವರೆಗೆ ದೂರವಾಣಿ ಮತ್ತು ಮೊಬೈಲ್ ಸಂಪರ್ಕವನನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಘಟನೆಗೆ ಸಂಬಂಧಿಸಿದಂತೆ ತೀವ್ರ ತನಿಖೆಯನ್ನು ನಡೆಸಲಾಗುತ್ತಿದ್ದು, ಕೃತ್ಯದ ಹಿಂದೆ ಸಿಮಿ, ಲಷ್ಕರ್ ಸಾಧ್ಯತೆ ಇರುವುದಾಗಿ ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|