ಭಾರತ ಅಮೆರಿಕ ಪರಮಾಣು ಒಪ್ಪಂದವು ದೇಶಕ್ಕೆ ಅತಿ ಮುಖ್ಯವಾಗಿದ್ದು, ಭಾರತವು ಈ ಒಪ್ಪಂದದಲ್ಲಿ ಮುಂದುವರಿಯಬೇಕು ಎಂಬುದಾಗಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅಭಿಪ್ರಾಯಿಸಿದ್ದಾರೆ.
ಚೆನ್ನೈನ ಪೊಲಾರಿಸ್ ಸಾಫ್ಟ್‌ವೇರ್ ಲ್ಯಾಬ್‌ನಿಂದ ಸಂಘಟಿಸಲ್ಪಟ್ಟ 11ನೇ ವಾರ್ಷಿಕ ಉಲ್ಲಾಸ್ ಟ್ರಸ್ಟ್ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಅಣು ಒಪ್ಪಂದವು ದೇಶಕ್ಕೆ ಅತ್ಯಂತ ಅಗತ್ಯವಾಗಿದೆ ಎಂದಿದ್ದಾರೆ.
ಮಕ್ಕಳೆಂದರೆ ಕಲಾಂ ಅವರಿಗೆ ಯಾಕೆ ಇಷ್ಟ ಎಂದು ಇದೇ ವೇಳೆ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಕಲಾಂ, ಮಕ್ಕಳು ಪಕ್ಷಪಾತರಹಿತರು ಮತ್ತು ಮುಗ್ಧರು ಎಂದು ನುಡಿದರು.
ಭಾರತೀಯ ವಿಜ್ಞಾನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುವ ಬದಲು ನಾಸಾದಲ್ಲಿ ಕಾರ್ಯನಿರ್ವಹಿಸಲು ಯಾಕೆ ಬಯಸುತ್ತಾರೆ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಕಲಾಂ, ವಿಜ್ಞಾನವೆಂಬುದು ಸೀಮಾರಹಿತ. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|