ಆಶ್ಚರ್ಯಕಾರಿ ಬೆಳವಣಿಗೆಯೆಂಬಂತೆ, ವಿಶ್ವಾಸಮತ ಸಂದರ್ಭ ಅಡ್ಡಮತದಾನದ ಕುರಿತಂತೆ ಸರಕಾರದ ಪರವಾಗಿ ಮತ ಚಲಾಯಿಸುವಂತೆ ಕೋರಿ ಬಿಜೆಪಿಯ ಸುಮಾರು 50 ಸಂಸದರನ್ನು ಸಂಪರ್ಕಿಸಲಾಗಿತ್ತು ಎಂಬ ವಿಚಾರವನ್ನು ಬಿಜೆಪಿಯು ಬಹಿರಂಗಪಡಿಸಿದೆ.
ಬಿಜೆಪಿಯ ಸುಮಾರು 50 ಸಂಸದರನ್ನು ಸಂಪರ್ಕಿಸಿ ಆಮಿಷಗಳನ್ನು ಒಡ್ಡಲಾಗಿತ್ತು. ಆದರೆ, ಈ ಆಮಿಷಗಳನ್ನು ಸಂಸದರು ನಿರಾಕರಿಸುವುದರೊಂದಿಗೆ, ಅದನ್ನು ಬಹಿರಂಗ ಮಾಡಲು ಮುಂದಾಗಿದ್ದಾರೆ ಎಂದು ಲೋಕಸಭೆಯಲ್ಲಿನ ಬಿಜೆಪಿಯ ಉಪನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏನೇ ಆದರೂ, ವಿಶ್ವಾಸಮತದ ವೇಳೆ ತಟಸ್ಥವಾಗುಳಿದ ಮತ್ತು ಅಡ್ಡಮತದಾನ ಮಾಡಿದ ಎಂಟು ಸಂಸದರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯ ಮೂರು ಸಂಸದರಾದ ಮಧ್ಯಪ್ರದೇಶದ ಅಶೋಕ್ ಅಗ್ರಾಲ್, ಫಾಗಾನ್ ಸಿಂಗ್ ಕುಲಾಸ್ತೆ ಮತ್ತು ರಾಜಸ್ಥಾನದ ಮಹಾವೀರ್ ಬಗೋರಾ ಅವರು ಸ್ಪೀಕರ್ ಕಾರ್ಯಾಲಯಕ್ಕೆ ಈಗಾಗಲೇ ದೂರನ್ನು ನೀಡಿರುವುದಾಗಿ ಮಲ್ಹೋತ್ರಾ ತಿಳಿಸಿದ್ದು, ಚಾನೆಲ್‌ನಿಂದ ಸಲ್ಲಿಸಲ್ಪಟ್ಟ ಸಿಡಿಯ ನಕಲು ಪ್ರತಿಯನ್ನು ನೀಡುವಂತೆ ಪಕ್ಷವು ಆಗ್ರಹಿಸಿರುವುದಾಗಿ ಹೇಳಿದ್ದಾರೆ.
ಕುಟುಕು ಕಾರ್ಯಾಚರಣೆ ಸಿಡಿಯ ನಕಲು ಪ್ರತಿಯನ್ನು ನೀಡುವಂತೆ ಸ್ಪೀಕರ್ ಕಾರ್ಯಾಲಯಕ್ಕೆ ಮನವಿ ಮಾಡಲಾಗಿದ್ದು, ಈ ಮೂಲಕ ಜನರೂ ಇದನ್ನು ನೋಡಬಹುದು ಮತ್ತು ಸತ್ಯವು ಬಹಿರಂಗಗೊಳ್ಳಬಹುದು ಅವರು ತಿಳಿಸಿದ್ದಾರೆ.
ಈ ನಡುವೆ, ಕುಟಕು ಕಾರ್ಯಾಚರಣೆಯಲ್ಲಿ ತನ್ನ ಪಕ್ಷದ ಪಾತ್ರವನ್ನು ಮಲ್ಹೋತ್ರಾ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
|