ಲೋಕಸಭೆಯಲ್ಲಿನ ವಿಶ್ವಾಸಮತ ಗೊತ್ತುವಳಿಯ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಯುಪಿಎ ಸರಕಾರದ ಪರ ಮತ ಹಾಕದಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು ತನ್ನ ಆರು ಸಂಸದರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದೆ.
ಪಕ್ಷದ ನಿಯಮವನ್ನು ಉಲ್ಲಂಘಿಸಿರುವ ಕಾರಣದಿಂದ ಆರು ಸಂಸದರನ್ನು ಉಚ್ಚಾಟಿಸಲಾಗಿದೆ. ಈ ನಿರ್ಧಾರದ ಕುರಿತಾಗಿ ಸ್ಪೀಕರ್‌ಗೆ ಭಾನುವಾರ ವಿವರಣೆ ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ತಿಳಿಸಿದ್ದಾರೆ.
ಜೈ ಪ್ರಕಾಶ್(ಮೋಹನ್‌ಲಾಲ್‌ಗಂಜ್), ಎಸ್.ಪಿ.ಸಿಂಗ್(ಜಾಲೆಸರ್), ರಾಜ್ ನರೇನ್ ಬುದೋಲಿಯಾ(ಹಮೀರ್ಪುರ್), ಅಫ್ಜಲ್ ಅನ್ಸಾರಿ(ಗಜಿಯಾಪುರ್), ಅತೀಕ್ ಅಹ್ಮದ್(ಫೂಲ್ಪುರ್) ಮತ್ತು ಮುನಾವರ್ ಹುಸೇನ್(ಮುಜಾಫರ್ ನಗರ್) ಪಕ್ಷದಿಂದ ಉಚ್ಚಾಟಿತಗೊಂಡ ಸಂಸದರು.
ಈ ನಡುವೆ, ಯುಪಿಎ ಪರ ಮತ ಹಾಕುವಂತೆ ಬಿಜೆಪಿ ಸಂಸದರಿಗೆ ಹಣ ನೀಡಿರುವ ಆರೋಪವನ್ನು ಸಿಂಗ್ ಖಂಡಾಖಂಡಿತವಾಗಿ ತಿರಸ್ಕರಿಸಿದ್ದು, ನಾವು ಕೂಡ ಸಂಸದರನ್ನು ಕಳೆದುಕೊಂಡಿದ್ದೇವೆ. ನಾವು ಯಾರಿಗೂ ಹಣವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|