ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಾಬಾದ್‌: 16ಕ್ಕೂ ಹೆಚ್ಚು ಕಡೆ ಬಾಂಬ್ ಸ್ಫೋಟ  Search similar articles
PTI
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಅಹಮದಾಬಾದ್‌‌ನಲ್ಲಿ ಶನಿವಾರ ಸಂಜೆ 16 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 55ರಷ್ಟು ಜನ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.

ಸಂಜೆ 6.45ರ ಬಳಿಕ 70 ನಿಮಿಷಗಳ ಅವಧಿಯಲ್ಲಿ, ಅಹಮದಾಬಾದ್‌‌ನ ಬಾಪು ನಗರ, ಮಣಿನಗರ, ಜವಾಹರ್ ಚೌಕ್, ಅಮರೈವಾಡಿ, ರಾಯ್‌‌ಪುರ್, ಸಾರಂಗ್‌ಪುರ್ ಸೇರಿದಂತೆ 16 ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಬಸ್‌ನೊಳಗೆ ಮೊದಲಿಗೆ ಸ್ಫೋಟ ಸಂಭವಿಸಿತ್ತು. ಟಿಫಿನ್ ಬಾಕ್ಸ್ ಮತ್ತು ಸೈಕಲ್‌‌ಗಳಲ್ಲೂ ಬಾಂಬ್ ಸ್ಫೋಟಿಸಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಳೆ ಅಹಮದಾಬಾದ್ ಪ್ರದೇಶದಲ್ಲಿ ಹೆಚ್ಚಾಗಿ ಸ್ಫೋಟಗಳು ನಡೆದಿದ್ದು, 10 ಕಿ.ಮೀ. ಸುತ್ತಳತೆಯಲ್ಲೇ 16 ಬಾಂಬ್‌ಗಳು ಸ್ಫೋಟಿಸಿವೆ. ಇವೆಲ್ಲವೂ ಕಡಿಮೆ ತೀವ್ರತೆಯ ಬಾಂಬ್‌ಗಳಾಗಿದ್ದರೂ, ಸುಮಾರು 100 ಮೀಟರ್ ಅಂತರದಲ್ಲೇ ಸಿಡಿದಿರುವುದರಿಂದ ಸಾವು ನೋವು ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಬಾಂಬ್ ಸ್ಫೋಟಕ್ಕೆ ಮುನ್ನ ಕೆಲವು ಟಿವಿ ಚಾನೆಲ್‌ಗಳಿಗೆ ಇಂಡಿಯನ್ ಮುಜಾಹಿದೀನ್ ಎಂದು ಹೇಳಿಕೊಂಡ ಸಂಘಟನೆಯೊಂದು ಈ ಬಗ್ಗೆ ಎಚ್ಚರಿಕೆ ನೀಡಿ ಇ-ಮೇಲ್ ಅನ್ನೂ ಕಳುಹಿಸಿತ್ತು ಎಂದು ಮೂಲಗಳು ತಿಳಿಸಿವೆ,

ನಾಗರಿಕ ಆಸ್ಪತ್ರೆ ಮೇಲೂ ದಾಳಿ: ಭಯೋತ್ಪಾದನೆಯ ಅತ್ಯಂತ ಪೈಶಾಚಿಕ ಸಂಗತಿಯೆಂದರೆ, ಭಯೋತ್ಪಾದಕರು ಪೌರ ಆಸ್ಪತ್ರೆಗೂ ಬಾಂಬ್ ಇರಿಸಿದ್ದು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಿಷ್ಠ 6 ಮಂದಿ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ಮಣಿನಗರದಲ್ಲಿ 3 ಸ್ಫೋಟಗಳು ಸಂಭವಿಸಿವೆ.

ನಂಬರ್ ಪ್ಲೇಟ್ ಹೊಂದಿಲ್ಲದ ಹೀರೋ ಹೊಂಡಾದಲ್ಲಿ ಆಗಮಿಸಿದ್ದ ಆಗಂತುಕರು ಈ ದುಷ್ಕೃತ್ಯ ಎಸಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಸರಣಿ ಸ್ಫೋಟ ಸಂಭವಿಸಿದ ಬೆನ್ನಿಗೇ ದೇಶದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದರೂ, ಅಹಮದಾಬಾದ್‌ನಲ್ಲಿ ಈ ಸ್ಫೋಟ ಸಂಭವಿಸಿರುವುದು ಗುಪ್ತಚರ ಇಲಾಖೆಯತ್ತ ಜನ ಕಣ್ಣೆತ್ತಿ ನೋಡುವಂತಾಗಿದೆ. 24 ಗಂಟೆಗಳ ಅವಧಿಯಲ್ಲಿ ನಡೆದ ಎರಡೂ ಸ್ಫೋಟಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ನಡೆದಿದೆ ಎಂಬುದು ಗಮನಿಸಬೇಕಾದ ವಿಷಯ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್, ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಮುಂತಾದ ಹಿರಿಯ ನೇತಾರರು ಈ ಕುಕೃತ್ಯವನ್ನು ಖಂಡಿಸಿದ್ದು, ಶಾಂತಿ-ಸಾಮರಸ್ಯ ಕಾಪಾಡುವಂತೆ ಆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಕಟ್ಟೆಚ್ಚರ: ಅಹಮದಾಬಾದ್‌ನಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಹೈದರಬಾದ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಉನ್ನತ ಮಟ್ಟದ ಸಭೆ: ಬಾಂಬ್ ಘಟನೆಗೆ ಸಂಬಂಧಿಸಿದಂತೆ ನಾಳೆ ಬೆಳಿಗ್ಗೆ 11 ಗಂಟೆಗೆ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಮತ್ತಷ್ಟು
ಉಗ್ರಗಾಮಿಗಳ ಸುರಕ್ಷಿತ ತಾಣ 'ಸಿಲಿಕಾನ್ ಸಿಟಿ'
ವಿಪ್ ಉಲ್ಲಂಘನೆ: 6 ಎಸ್ಪಿ ಸಂಸದರ ಉಚ್ಚಾಟನೆ
ಐಟಿ ಕ್ಷೇತ್ರಕ್ಕೆ ಸಿಐಎಸ್ಎಫ್ ರಕ್ಷಣೆ: ಪಾಟೀಲ್
ಅಡ್ಡಮತ ಯಾಚಿಸಿ 50 ಸಂಸದರಿಗೆ ಮನವಿ: ಬಿಜೆಪಿ ಬಹಿರಂಗ
ಮಾಯಾವತಿ ಅಕ್ರಮ ಆಸ್ತಿ: ವಿಚಾರಣೆ ನ.3ಕ್ಕೆ
ಸ್ಪೀಕರ್ ಮೇಲೆ ಆರೋಪ ಮಾಡಿಲ್ಲ: ಯೆಚೂರಿ