ಚೆನ್ನೈ, ತಿರುನಲ್ವೇಲಿ ಮತ್ತು ವಿವಿಧೆಡೆ ರೈಲುಗಳಲ್ಲಿ ಆಗಸ್ಟ್ 15ರಂದು ಬಾಂಬ್ ಸ್ಫೋಟ ನಡೆಸಲು ಸಂಚು ನಡೆಸುತ್ತಿದ್ದ ಆರೋಪದಲ್ಲಿ ರವಿವಾರ ತಮಿಳುನಾಡು ಕ್ಯೂ ವಿಭಾಗದ ಚೆನ್ನೈ ಪೊಲೀಸರಿಂದ ಬಂಧನಕ್ಕೊಳಗಾದ 39 ವರ್ಷದ ಶಂಕಿತ ವ್ಯಕ್ತಿಯೊಬ್ಬನ ಹೇಳಿಕೆಯ ಆಧಾರದಲ್ಲಿ , ತಿರುನಲ್ವೇಲಿಯ ಹೀರಾ ಅಲಿಯಾಸ್ ಕಾಸಿಂ ಮತ್ತು ಚೆನ್ನೈನ ಮನ್ನಾಡಿಯ ಅಬ್ದುಲ್ ಖಾದರ್ ಅವರನ್ನು ಬಂಧಿಸಲಾಗಿದೆ.
ಟಿ.ನಗರ್ ರಂಗನಾಥನ್ ಸ್ಟ್ರೀಟ್‌ನ ಅಂಗಡಿ ಒಂದರಲ್ಲಿ ಉದ್ಯೋಗಿಯಾಗಿರುವ ಶೇಖ್ ಅಬ್ದುಲ್ ಗಫೂರ್ ಎಂಬ ವ್ಯಕ್ತಿಯನ್ನು ತಿರುನಲ್ವೇಲಿಯ ಪೇಟ್ಟೈನಲ್ಲಿ ಆತನ ಸಂಬಂಧಿಕರ ಮನೆಯಿಂದ ರವಿವಾರ ಬಂಧಿಸಿ, ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈತನು ನೀಡಿರುವ ಮಾಹಿತಿಯನ್ನು ಆಧರಿಸಿ ಇವರಿಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಚೆನ್ನೈಗೆ ಕರೆತರಲಾಗುತ್ತಿದೆ.
ತಿರುನಲ್ವೇಲಿಯಲ್ಲಿ ರೈಲುಗಳಲ್ಲಿ ಮತ್ತು ಚೆನ್ನೈನ ವಿವಿಧ ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ಹೂಡಿರುವುದಾಗಿ ಗಫೂರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಈ ಸ್ಫೋಟದ ಸಂಚನ್ನು ಚೆನ್ನೈನ ಪುಳಲ್ ಜೈಲಿನಲ್ಲಿ ನಡೆಸಲಾಗಿರುವುದಾಗಿ ಕಂಡುಕೊಳ್ಳಲಾಗಿದೆ.
ಇದರ ಪ್ರಮುಖ ವ್ಯಕ್ತಿಯು ಪಲ್ಲಾವರಂನ ಅಲಿ ಅಬ್ದುಲ್ಲಾ ಎಂಬವನಾಗಿದ್ದು, ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಅಬ್ದುಲ್ಲಾ ಎಂಟು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ. ಅಲ್ಲದೆ ಈತ, ಲಷ್ಕರ್ ಎ ತೊಯ್ಬಾ ಸಂಘಟನೆಯಲ್ಲಿ ತರಬೇತಿಯನ್ನು ಪಡೆಯಲು 1997ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಎಂದು ಮೂಲಗಳು ತಿಳಿಸಿವೆ.
2003ರಿಂದ ಜೈಲಿನಲ್ಲಿರುವ ಅಬ್ದುಲ್ಲಾ, ಜಿಹಾದ್ ಸಮಿತಿ ಮತ್ತು ಇಸ್ಲಾಮಿಕ್ ರಕ್ಷಣಾ ದಳದ ಮಾಜಿ ಸದಸ್ಯನಾಗಿದ್ದ. ಯೋಜನೆಯ ಅಂಗವಾಗಿ, ಸ್ಫೋಟಕ ಮತ್ತು ಟೈಮರ್‌ಗಳನ್ನು ಸಂಗ್ರಹಿಸಲು ಪ್ರತ್ಯೇಕ ಗಂಪನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಎರಡು ಟೈಮರ್ ಸಾಧನಗಳು, ಸಂಭಾವ್ಯ ಗುರಿಯ ರೇಖಾಚಿತ್ರ, ಟಾರ್ಚ್ ಬ್ಯಾಟರಿ, ಗಡಿಯಾರ, ವೈರ್, ರೇಡಿಯೋ ಸ್ವಿಚ್ ಮತ್ತು ಸಾಮಾನ್ಯ ಸ್ವಿಚ್‌ಗಳನ್ನು ಗಫೂರ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಗಫೂರ್ ಇಸ್ಲಾಮಿಕ್ ಉಪದೇಶಗಳನ್ನು ಪ್ರಸಾರಮಾಡಲು ಮೀಸಲಾಗಿದ್ದ ರಾಜಕೀಯ ಸಂಸ್ಥೆ ತೌಹೀದ್ ಜಮಾತ್‌ನ ಉಚ್ಚಾಟಿತ ಸದಸ್ಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಎಂಎಸ್ ರವಾನೆ: ಐವರ ಸೆರೆ: ಏತನ್ಮಧ್ಯೆ, ಚೆನ್ನೈನಲ್ಲಿ ಬಾಂಬ್ ಸ್ಫೋಟದ ಎಚ್ಚರಿಕೆಯನ್ನು ಹೊಂದಿದ ಕೀಟಲೆ ಎಸ್ಎಂಎಸ್‌ಗಳನ್ನು ರವಾನಿಸುತ್ತಿದ್ದ ಐದು ಮಂದಿಯನ್ನು ಇಂದು ಬಂಧಿಸಲಾಗಿದೆ.
ಇದು ಕ್ಷಮೆ ಇಲ್ಲದ ಅಪರಾಧ ಮತ್ತು ಇದು ಮೂರು ವರ್ಷಗಳ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಹೇಳುವ ಮೂಲಕ ಇಂತಹ ಎಸ್ಎಂಎಸ್‌ಗಳನ್ನು ಕಳುಹಿಸದಂತೆ ಪೊಲೀಸ್ ಆಯುಕ್ತ ಆರ್.ಶೇಖರ್ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಶೇಖರ್ ನೇತೃತ್ವದಲ್ಲಿ ಚೆನ್ನೈ ಪೊಲೀಸರು ಬಾಂಬ್ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ಉಪನಗರಗಳಿಗೆ ತೆರಳುವ ರೈಲ್ವೇ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
|