ಉತ್ತರ ಪ್ರದೇಶ ಕೋರ್ಟ್ ಹಾಗೂ ಜೈಪುರದ ಸ್ಫೋಟ ಬಳಿಕ ಅಹಮದಾಬಾದ್ ಸರಣಿ ಸ್ಫೋಟವು ತನ್ನ 3ನೇ ಯಶಸ್ಸು ಎಂದು 'ಇಂಡಿಯನ್ ಮುಜಾಹಿದೀನ್' ಎಂಬ ಉಗ್ರಗಾಮಿ ಸಂಘಟನೆ ಘೋಷಿಸಿಕೊಳ್ಳುವುದರೊಂದಿಗೆ, ನಿಷೇಧಿತ 'ಸಿಮಿ' ಹೊಸ ರೂಪದಲ್ಲಿ ಕಾರ್ಯಾಚರಿಸುತ್ತಿದೆಯೇ ಎಂಬ ಶಂಕೆ ದಟ್ಟವಾಗತೊಡಗಿದೆ.
ಇದು ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಅಥವಾ ಲಷ್ಕರ್-ಇ-ತೋಯಿಬಾ ಹಾಗೂ ಜೈಷ್-ಇ-ಮೊಹಮ್ಮದ್‌ಗಳ ಮಿಶ್ರಣವು ಬೇರೊಂದು ಹೆಸರಲ್ಲಿ ಕಾರ್ಯಾಚರಿಸುತ್ತಿದೆಯೇ ಎಂಬ ಶಂಕೆಗೆ ಪುಷ್ಟಿ ನೀಡಿರುವುದು ಈ ಸ್ಫೋಟಗಳಲ್ಲಿನ ಸಾಮ್ಯತೆ. ಇದು ಸಿಮಿಯೇ ಆಗಿರುವ ಸಾಧ್ಯತೆಯೇ ಅಧಿಕವಾಗಿದೆ ಎನ್ನುತ್ತಾರೆ 'ರಾ' (ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಮಾಜಿ ಹೆಚ್ಚುವರಿ ಕಾರ್ಯದರ್ಶಿ ಬಿ.ರಾಮನ್. ಈ ಮೂರೂ ಸ್ಫೋಟಗಳು ಸಿಮಿಯ ಕೃತ್ಯವನ್ನೇ ಹೋಲುತ್ತಿದ್ದು, ಅದೇ ಉದ್ದೇಶವನ್ನೂ ಹೊಂದಿದೆ.
1998ರ ಕೊಯಮತ್ತೂರು ಸರಣಿ ಸ್ಫೋಟಗಳ ಹಿಂದಿದ್ದ ತಮಿಳುನಾಡು ಮೂಲದ ಅಲ್-ಉಮ್ಮಾ ಎಂಬ ನಿಷೇಧಿತ ಉಗ್ರಗಾಮಿ ಸಂಘಟನೆ ಮತ್ತು ಸಿಮಿ ಜಂಟಿಯಾಗಿ ಸೇರಿಕೊಂಡು ಕಟ್ಟಾ ಉಗ್ರಗಾಮಿಗಳ ಪಡೆಯೊಂದನ್ನು ರಚಿಸಿ ಕಾರ್ಯಾಚರಿಸುತ್ತಿರುವ ಸಾಧ್ಯತೆಗಳನ್ನೂ ಗುಪ್ತಚರ ಅಧಿಕಾರಿಗಳು ತಳ್ಳಿ ಹಾಕುತ್ತಿಲ್ಲ. ಯಾಕೆಂದರೆ ಬೆಂಗಳೂರಿನಲ್ಲಿಯೂ ಅಸ್ತಿತ್ವ ತೋರಿಸಿರುವ ಅಲ್-ಉಮ್ಮಾ ಮತ್ತು ಸಿಮಿ ಸಂಘಟನೆಗಳಲ್ಲಿ ಸೈದ್ಧಾಂತಿಕ ಸಹಮತವೂ ಇದೆ.
ಉತ್ತರ ಪ್ರದೇಶ ಕೋರ್ಟ್ ಸಂಕೀರ್ಣದಲ್ಲಿ ನಡೆದ ಸ್ಫೋಟದ ಸಂದರ್ಭ, ಲಷ್ಕರ್ ಮತ್ತು ಜೈಷ್‌ಗಳ ತಾತ್ಕಾಲಿಕ ಮೈತ್ರಿಕೂಟವೇ ಇಂಡಿಯನ್ ಮುಜಾಹಿದೀನ್ ಎಂಬ ಶಂಕೆ ಬಲವಾಗಿತ್ತು. ಭಯೋತ್ಪಾದಕರ ಪರ ವಾದಿಸಲು ವಕೀಲರು ನಿರಾಕರಿಸಿದ್ದುದೇ ಈ ಸ್ಫೋಟಕ್ಕೆ ಕಾರಣವಾಗಿತ್ತು. ಆದರೆ ಜೈಪುರ ಸರಣಿ ಸ್ಫೋಟದ ಸಂದರ್ಭ, ಸ್ಥಳೀಯ ಶಕ್ತಿಗಳು ಸಿಮಿಯಂತಹ ಉಗ್ರಗಾಮಿ ಸಂಘಟನೆಗಳಿಗೆ ಪೋಷಣೆ ನೀಡಿದ್ದಿರಬಹುದು ಎಂಬ ಸಂದೇಹ ಕಾಣಿಸಿಕೊಂಡಿತ್ತು.
|