ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದೊಂದಿಗೆ ಯುಪಿಎ ಸರಕಾರವು ಕೇಂದ್ರದಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಭಾರತೀಯ ಜನತಾ ಪಕ್ಷವು ಸೋಮವಾರ ಆರೋಪಿಸಿದ್ದು, ಯಾವುದೇ ಪರ್ಯಾಯವಿಲ್ಲದೆ ಪೋಟಾ ಕಾಯಿದೆಯ ರದ್ದು ನಿರ್ಧಾರವು ಭಯೋತ್ಪಾದನೆ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ದೂರಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ದೇಶಕ್ಕೆ ಕಠಿಣ ಕಾನೂನಿನ ಅಗತ್ಯವಿದೆಯಾದರೂ, ಯುಪಿಎ ಸರಕಾರವು ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ ಪೋಟಾ ಕಾಯಿದೆಯನ್ನು ರದ್ದುಮಾಡಿದೆ. ಇದು ದೇಶದ ಅಮಾಯಕರನ್ನು ಗುರಿಯಾಗಿಸಿ ನಡೆಸುವ ಉಗ್ರಗಾಮಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸಕ್ತ ಪರಿಸ್ಥಿತಿಯನ್ನು ನಿಭಾಯಿಸಲು ಫೆಡರಲ್ ಏಜೆನ್ಸಿ ಸ್ಥಾಪಿಸುವ ಕೇಂದ್ರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಠಿಣ ಕಾನೂನು ನಿರ್ಮಿಸದ ಹೊರತು ಇಂತಹ ಏಜೆನ್ಸಿಗಳ ಸ್ಥಾಪನೆಯಿಂದ ಯಾವುದೇ ಪ್ರಯೋಜನವಿಲ್ಲ, ಇದು ಶಸ್ತ್ರಾಸ್ತ್ರವಿಲ್ಲದ ಸೈನಿಕರಂತೆ ಎಂದು ಸ್ಪಷ್ಟಪಡಿಸಿದರು.
ಸರಣಿ ಬಾಂಬ್ ಸ್ಫೋಟ ಮತ್ತು ಸ್ಫೋಟಕ್ಕೆ ರಾಜ್ಯ ಸರಕಾರಗಳ ಹೊಣೆ ಎಂಬ ಹೇಳಿಕೆಗಳ ಮೂಲಕ ಯುಪಿಎ ಸರಕಾರವು ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ ರಾಜನಾಥ್ ಸಿಂಗ್, ಇಂತಹ ಘಟನೆಗಳನ್ನು ಮತಬ್ಯಾಂಕ್ ರಾಜಕೀಯಗಳಿಗೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಚಟುವಟಿಕೆಯ ನಿಗ್ರಹದಲ್ಲಿನ ಕೇಂದ್ರ ನಿಷ್ಟೆಯ ಮುಂದುವರಿಕೆಗೆ ತನ್ನ ಪಕ್ಷವು ಎಂದಿಗೂ ಬೆಂಬಲ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|