ಅಹಮ್ಮದಬಾದ್: ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆ ನಡೆಸಿರುವ ರಾಜಸ್ಥಾನ ಪೊಲೀಸರ ತಂಡವೊಂದು ಸರಣಿ ಬಾಂಬ್ ಸ್ಪೋಟದ ತನಿಖೆಯಲ್ಲಿ ಗುಜರಾತ್ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಹಕರಿಸಲು ಅಹಮ್ಮದಬಾದ್ ತಲುಪಿದೆ.
ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಅಹಮ್ಮದಬಾದ್ ಸರಣಿ ಬಾಂಬ್ ಸ್ಫೋಟಕ್ಕೂ ಸಂಬಂಧವಿದೆಯೆಂದು ಅನಿಸುತ್ತಿದೆ ಎಂದು ಗುಜರಾತ್ ಪೊಲೀಸ್ (ಕ್ರೈಂ) ವಿಭಾಗದ ಜಂಟಿ ಆಯುಕ್ತ ಆಶೀಷ್ ಭಾಟಿಯ ತಿಳಿಸಿದ್ದು ರಾಜಸ್ಥಾನ ಪೊಲೀಸರು ತನಿಖೆಯಲ್ಲಿ ನಮ್ಮೊಂದಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಎರಡೂ ನಗರದಲ್ಲಿ ನಡೆದ ಸ್ಫೋಟಗಳ ಹಿಂದೆ ಒಂದೇ ಸಂಘಟನೆಯ ಕೈವಾಡವಿರುವ ಸಾಧ್ಯತೆಯಿದ್ದು ನಾವು ಈ ನಿಟ್ಟಿನಲ್ಲಿ ತನಿಖೆ ಮಾಡಲಿದ್ದೇವೆ ಎಂದು ಭಾಟಿಯ ಹೇಳಿದ್ದಾರೆ. ಇದೇ ವೇಳೆ ಗುಜರಾತ್ ಪೊಲೀಸರ ತಂಡವೊಂದು ರಾಜಸ್ಥಾನಕ್ಕೆ ತೆರಳಿ ಜೈಪುರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿದೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
ಜುಲೈ 26ರಂದು ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 49 ಮಂದಿ ಅಸುನೀಗಿದ್ದು 145 ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟಗಳು ಒಂದು ಗಂಟೆಯ ಅವಧಿಯಲ್ಲಿ ಮಣಿನಗರ, ಇಸಾನ್‌ಪುರ, ನರೊಲ್ ಸರ್ಕಲ್, ಬಾಪುನಗರ, ಹತ್ಕೇಶ್ವರ್, ಸರಂಗ್‌ಪುರ ಸೇತುವೆ, ಸರ್ಕೆಜ್ ಮತ್ತು ಒಧವ್‌ಗಳಲ್ಲಿ ನಡೆದಿತ್ತು.
|