ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆಯ ಇತ್ತೀಚಿನ ಘಟನೆ ಎಂಬಂತೆ ಭಾರತ ಮತ್ತು ಪಾಕಿಸ್ತಾನ ಸೇನಾ ಪಡೆಗಳ ನಡುವೆ ಗುಂಡಿನ ಘರ್ಷಣೆಯುಂಟಾಗಿದ್ದು, ಭಾರತೀಯ ಜವಾನೊಬ್ಬ ಹತನಾಗಿರುವುದಾಗಿ ವರದಿಯಾಗಿದೆ. ಇದೇ ವೇಳೆ ಪಾಕಿಸ್ತಾನದ ನಾಲ್ವರು ಸೈನಿಕರೂ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನಿ ಸೈನಿಕರ ಪಡೆಯು ಬಿಳಿ ಬಾವುಟಗಳನ್ನು ಹಾರಿಸುತ್ತಾ ಸೋಮವಾರ ಅಪರಾಹ್ನ ಸುಮಾರು ಮೂರುವರೆ ಗಂಟೆಯಷ್ಟು ಹೊತ್ತಿಗೆ ಗಡಿನಿಯಂತ್ರಣ ರೇಖೆಯನ್ನು ದಾಟಿದಾಗ ಸಮಸ್ಯೆ ಆರಂಭವಾಯಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅನಿಲ್ ಮಾಥೂರ್ ಹೇಳಿದ್ದಾರೆ.
"ಅಪರಾಹ್ನ ಸುಮಾರು 3.30ರ ಹೊತ್ತಿಗೆ ನಾವು ಪಾಕಿಸ್ತಾನಿ ಪಡೆಗಳನ್ನು ಕಂಡೆವು. ಅವರು ಗಡಿನಿಯಂತ್ರಣ ರೇಖೆಯನ್ನು ದಾಟಿದ್ದರು. ನಮ್ಮ ಗಸ್ತು ಪಡೆಯು ಅವರೊಂದಿಗೆ ಮಾತನಾಡಲು ಉದ್ಯಕ್ತವಾಗಿದ್ದಾಗ ಅವರು ಗುಂಡು ಹಾರಿಸಿದರು. ಬಳಿಕ ತಮ್ಮ ಸ್ಥಾನಗಳಿಗೆ ತೆರಳಿದ ಪಾಕಿಸ್ತಾನ ಪಡೆ ನಮ್ಮತ್ತ ಗುಂಡು ಹಾರಿಸಲು ಆರಂಭಿಸಿದ್ದು, ನಾವು ಪ್ರತ್ಯುತ್ತರ ನೀಡಿದೆವು. ಇದು ಕಳೆದ ನಾಲ್ಕು ವರ್ಷಗಳಲ್ಲೇ ನಾವು ನಡೆಸಿದ ಪ್ರಥಮ ಪ್ರತಿದಾಳಿಯಾಗಿದೆ" ಎಂದು ಅವರು ಹೇಳಿದ್ದಾರೆ.
ಉಭಯ ಪಡೆಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಈವೇಳೆ ಪಾಕಿಸ್ತಾನಿ ಸೈನಿಕರು ಗುಂಡುಹಾರಾಟ ಆರಂಭಿಸಿದ್ದು ಒರ್ವ ಸೈನಿಕ ಸಾವನ್ನಪ್ಪಿದ್ದಾರೆ. ಭಾರತೀಯ ಸೈನಿಕರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದು, ಇದು ಪಾಕ್ ಪಡೆಗಳು ತಮ್ಮ ಗಡಿನಿಯಂತ್ರಣ ರೇಖೆಯತ್ತ ತೆರಳುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಶಾಂತಿ ಪ್ರಕ್ರಿಯೆಯು ಒತ್ತಡದಲ್ಲಿದೆ ಎಂಬುದಾಗಿ ಹೇಳಿಕೆ ನೀಡಿದ ಒಂದು ವಾರದ ಬಳಿಕ ಈ ದುರ್ಘಟನೆ ಸಂಭವಿಸಿದೆ.
|