ಸಿಪಿಐ-ಎಂ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಇದೇ ಮೊದಲಿಗೆ ಮೌನಮುರಿದಿರುವ ಪ್ರಮುಖ ಮಾರ್ಕ್ಸಿಸ್ಟ್ ನಾಯಕ ಸ್ಪೀಕರ್ ಸೋಮನಾಥ್ ಚಟರ್ಜಿ, ಪಕ್ಷದ ನಿರ್ಧಾರವು ಅತ್ಯಂತ ನೋವನ್ನುಂಟುಮಾಡಿದೆ ಎಂದಿದ್ದಾರೆ.
"ನಾನು ಮಾನಸಿಕವಾಗಿ ಅತ್ಯಂತ ನೋವನ್ನನುಭವಿಸುತ್ತಿದ್ದೇನೆ" ಎಂದು ಸಿಪಿಐ-ಎಂ ಮಾಜಿ ನಾಯಕ ಸೈಫುದ್ದೂನ್ ಚೌಧರಿ ಅವರೊಂದಿಗೆ ಖಾಸಗಿ ಮಾತುಕತೆಯ ವೇಳೆ ಹೇಳಿದ್ದಾರೆ.
ಪಕ್ಷದ ಈ ನಿರ್ಧಾರವು ತನಗೆ ಎಷ್ಟು ನೋವುಂಟುಮಾಡಿದೆಯೆಂದರೆ, ರಾಜಕೀಯ ಚಟುವಟಿಕೆಯಲ್ಲಿ ಜಿಗುಪ್ಸೆ ಬಂದುಬಿಟ್ಟಿದೆ ಎಂದು ಸೈಫುದ್ದೀನ್ ಅವರೊಂದಿಗೆ ಚಟರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ವಿಪ್ ಉಲ್ಲಂಘಿಸಿ ವಿಶ್ವಾಸಮತದ ವೇಳೆ ಸ್ಪೀಕರ್ ಆಗಿ ಮುಂದುವರಿದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಕೋಮುವಾದಿ ಶಕ್ತಿಗಳ ಜೊತೆ ಸೇರಿಕೊಂಡು ಮತಚಲಾಯಿಸುವುದು ತನಗೆ ಇಷ್ಟವಿರಲಿಲ್ಲ ಎಂದಿದ್ದಾರೆ.
ಅಣು ಒಪ್ಪಂದದ ಕುರಿತಾಗಿ ಯುಪಿಎ ಸರಕಾರದಿಂದ ಬಾಹ್ಯ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡ ಎಡಪಕ್ಷಗಳ ನಿರ್ಧಾರವನ್ನು ಇದೇ ವೇಳೆ ಪ್ರಶ್ನಿಸಿದ ಚಟರ್ಜಿ, ಭಾರತ ಅಮೆರಿಕ ಅಣು ಒಪ್ಪಂದವು ಪ್ರಜಾತಂತ್ರದೊಂದಿಗೆ ಚುನಾಯಿತಗೊಂಡ ಸರಕಾರವನ್ನು ಉರುಳಿಸುವಷ್ಟು ದೊಡ್ಡ ವಿಷಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|