ವಡೋದರ: ಆಹಮದಾಬಾದ್‌ನಲ್ಲಿ 49 ಮಂದಿಯ ಪ್ರಾಣಕ್ಕೆ ಎರವಾಗಿ 200 ಮಂದಿಯನ್ನು ಗಾಯಗೊಳಿಸಿದ ಸರಣಿ ಬಾಂಬ್ ಸ್ಫೋಟದ ಕಾರಾಸ್ಥಾನ ವಡೊದರವಾಗಿರುವ ಸಾಧ್ಯತೆಗಳಿವೆ ಎಂಬುದಾಗಿ ಪೊಲೀಸರು ಸಂಶಯಿಸಿದ್ದಾರೆ.
ಸ್ಫೋಟಕಗಳನ್ನು ಹೊಂದಿದ್ದ ಆರೋಪದಡಿಯಲ್ಲಿ ವಶಪಡಿಸಿಕೊಂಡಿರುವ ಮೂರು ವ್ಯಾಗನ್‌ಅರ್ ಕಾರುಗಳ ಜಾಡನ್ನು ಹಿಡಿದು ತನಿಖೆ ಮುಂದುವರಿಸುತ್ತಿರುವ ಪೊಲೀಸರು, ಆ ಕಾರುಗಳನ್ನು ನವಿ ಮುಂಬೈಯಿಂದ ಜುಲೈ 8 ಮತ್ತು 15ರ ಮಧ್ಯೆ ಕಳವು ಮಾಡಲಾಗಿದೆ ಎಂಬ ಸುಳಿವು ಪಡೆದುಕೊಂಡಿದ್ದಾರೆ.
ಈ ಕಾರುಗಳನ್ನು ನವಿ ಮುಂಬೈಯಿಂದ ಸೂರತ್‌ಗೆ ವಡೊದರ - ಆಹಮ್ಮದಾಬಾದ್ ಎಕ್ಸ್‌ಪ್ರೆಸ್‌ವೇಯ ಮೂಲಕ ಒಯ್ದಿರುವುದಾಗಿ ಟೋಲ್ ಟ್ಯಾಕ್ಸ್ ರಶೀದಿಗಳು ಹೇಳುತ್ತವೆ.
ಕಾರುಗಳನ್ನು ಚಲಾಯಿಸುತ್ತಿದ್ದವರು ವಡೋದರದಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿದ್ದರೆಂಬುದನ್ನೂ ಪುರಾವೆಗಳು ಹೇಳುತ್ತವೆ. ಬಳಿಕ ಅವರು ಅಹಮದಾಬಾದಿನ ಸ್ಫೋಟ ಸ್ಥಳಗಳಿಗೆ ತೆರಳಿದ್ದಾರೆನ್ನಲಾಗಿದೆ. ಅದೇ ರಾತ್ರಿ ದುಷ್ಕರ್ಮಿಗಳು ವಡೋದರಕ್ಕೆ ಮರಳಿದ್ದು, ಬಳಿಕ ಕಾರುಗಳಲ್ಲಿ ಸ್ಫೋಟಕಗಳನ್ನು ತುಂಬಲಾಗಿದೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಮರುದಿನದಂದು ಕೆಂಪು ಮತ್ತು ಕಪ್ಪು ವ್ಯಾಗನ್ ಆರ್ ಕಾರುಗಳನ್ನು ಸೂರತ್‌ಗೆ ಒಯ್ದಿದ್ದರೆ, ಮೂರನೆಯ ವ್ಯಾಗನ್ ಆರ್ ಹಾಗೂ ಮತ್ತೊಂದು ಮಾರುತಿ 800 ಕಾರುಗಳನ್ನು ಅಹಮದಾಬಾದಿನ ಆಸ್ಪತ್ರೆಯೊಂದರ ಬಳಿ ಪಾರ್ಕ್ ಮಾಡಲಾಗಿತ್ತು.
ದುಷ್ಕರ್ಮಿಗಳು ಇರಿಸಿರುವ ಬಾಂಬುಗಳಲ್ಲಿ 16 ಬಾಂಬುಗಳು ಅಹಮದಾಬಾದಿನಲ್ಲಿ ಸ್ಫೋಟಗೊಂಡಿದ್ದರೆ, 18 ಬಾಂಬುಗಳು ಜೀವಂತವಾಗಿ ಸೂರತ್‌ನಲ್ಲಿ ಪತ್ತೆಯಾಗಿದ್ದವು
ವಡೋದರವು ಸೂರತ್ ಮತ್ತು ಅಹಮದಾಬಾದ್ ನಡುವೆ ನೆಲೆಸಿದ್ದು ಇದೇ ಪ್ರದೇಶವನ್ನು ಉಗ್ರರು ತಮ್ಮ ಕಾರಸ್ಥಾನವಾಗಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ, ಜೂನ್ 25ರಂದು ಸಿಮಿ ಕಾರ್ಯಕರ್ತರು ವಡೋದರದ ಯಾಕುಬ್‌ಪುರ ಪ್ರದೇಶದಲ್ಲಿರುವ ಅಲ್ತಾಫ್ ಶೇಕ್ ಎಂಬಾತನ ಮನೆಯಲ್ಲಿ ಸಭೆನಡೆಸಿದ್ದರು. ಸಭೆ ಬಳಿಕ ಸಿಮಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಕದ್ದ ಕಾರುಗಳು ವಡೋದರಕ್ಕೆ ಎರಡು ಬಾರಿ ಪ್ರವೇಶಿಸಿವೆ ಎಂದು ಪೊಲೀಸರು ಹೇಳುತ್ತಾರೆ. ಈ ಕದ್ದ ಕಾರುಗಳಿಗೆ ತಗುಲಿಸಲಾಗಿದ್ದ ನಂಬರ್ ಪ್ಲೇಟ್‍ಗಳು ವಡೋದರದ ಎರಡು ದ್ವಿಚಕ್ರವಾಹನಗಳದ್ದಾಗಿದೆ. ಇದಲ್ಲದೆ, ಬಾಂಬ್‌ಗಳನ್ನು ಸುತ್ತಿಡಲಾಗಿರುವ ಪತ್ರಿಕೆಗಳು ವಡೋದರ ಡೇಟ್‌ಲೈನ್‌ಗಳನ್ನು ಹೊಂದಿವೆ. ಪತ್ರಿಕೆಗಳು ಮೇ 13, ಜೂನ್ 11 ಮತ್ತು ಜೂನ್ 30ರ ದಿನಾಂಕಗಳದ್ದಾಗಿವೆ. ಈ ಎಲ್ಲ ಅಂಶಗಳು ವಡೋದರವೇ ಬಾಂಬ್ ತಯಾರಿಯ ಮೂಲಸ್ಥಾನ ಹಾಗೂ ಒಂದು ತಿಂಗಳ ಹಿಂದೆಯೇ ಇವುಗಳನ್ನು ಸಿದ್ಧಪಡಿಸಲಾಗಿತ್ತು ಎಂಬ ಸುಳಿವು ನೀಡಿವೆ.
|