ಪ್ರಸಕ್ತ ಸಿಬಿಐ ನಿರ್ದೇಶಕ ವಿಜಯ್ ಶಂಕರ್ ಗುರುವಾರ ಹುದ್ದೆಯಿಂದ ನಿವೃತ್ತಿಹೊಂದಿದ ನಂತರ, ಎಂ.ಎಲ್ ಶರ್ಮಾ ಅವರು ಮುಂದಿನ ಸಿಬಿಐ ನಿರ್ದೇಶಕರಾಗಿ ಆಯ್ಕೆಗೊಳ್ಳುವ ಸಾಧ್ಯತೆಯಿದೆ.
1972ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶರ್ಮಾ, ಸಿಬಿಐ ಸೇವೆಯಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಈ ಹುದ್ದೆಯು ಎರಡು ವರ್ಷದ ಅಧಿಕಾರವಧಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ, ಶರ್ಮಾ ಜುಲೈ 31, 2010ರವರೆಗೆ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.
ತನ್ನ ಉತ್ತಮ ಸೇವೆಗಾಗಿ ಪೊಲೀಸ್ ಮೆಡಲ್ ಮತ್ತು ರಾಷ್ಟ್ರಾಧ್ಯಕ್ಷರ ಪೊಲೀಸ್ ಮೆಡಲ್ ಪಡೆದಿರುವ ಶರ್ಮಾ, ಪ್ರಸಕ್ತ ಸಿಬಿಐನ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಮಾಚಲ ಪ್ರದೇಶ ಸಿಬಿಐನ ಪ್ರಧಾನ ನಿರ್ದೇಶಕ ಅಶ್ವನಿ ಕುಮಾರ್ ಮತ್ತು ಕರ್ನಾಟಕದ ಮುಖ್ಯಸ್ಥ ಆರ್.ಶ್ರೀಕುಮಾರ್ ಅವರನ್ನೊಳಗೊಂಡ ಮೂರು ಮಂದಿಯ ಸಮಿತಿಯು 59 ವರ್ಷದ ಶರ್ಮ ಅವರ ಹೆಸರನ್ನು ಆಯ್ಕೆ ಮಾಡಿದೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸಂಸತ್ತಿನ ನೇಮಕ ಸಮಿತಿಯು ಶರ್ಮಾ ಅವರ ಹೆಸರನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ.
|