ಸೇತುಸಮುದ್ರಂ ಯೋಜನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ಆರು ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
"ಟಾಟಾ ಇಂಧನ ಸಂಶೋಧನಾ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಆರ್.ಕೆ.ಪಚೌರಿ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಂಡವನ್ನು ನಿಯೋಜಿಸಿದ್ದಾರೆ" ಎಂಬ ಅಂಶವನ್ನು ಒಳಗೊಂಡ ಸಂಸತ್ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅವರಿಂದ ಬರೆಯಲ್ಪಟ್ಟ ಪತ್ರವನ್ನು ಕೇಂದ್ರದ ಹಿರಿಯ ವಕೀಲ ಪಾಲಿ ಎಸ್.ನರಿಮನ್, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಡಾ.ಟಿ. ಚಕ್ರವರ್ತಿ, ಎಸ್.ಆರ್.ಶೇಲಿ, ಡಾ.ಎಸ್.ಕಾತಿರೋಲಿ, ಬಿ.ಆರ್.ರಾವ್ ಮತ್ತು ಭಾರತದ ಜಿಯಲಾಜಿಕಲ್ ಸಮೀಕ್ಷೆಯ ಪ್ರಧಾನ ನಿರ್ದೇಶಕ ಪಿ.ಎಂ.ತಾಜೇಲಿ ಅವರನ್ನೊಳಗೊಂಡ ನೂತನ ಸಮಿತಿಯು ತನ್ನ ವರದಿಯನ್ನು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ.
ಸುಮಾರು 35 ಕಿ.ಮೀ ಉದ್ದ ರಾಮಸೇತುವನ್ನು ಉಳಿಸಿಕೊಳ್ಳಲು ಕೇಂದ್ರವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಕುರಿತಾದ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮತ್ತು ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠದ ಸಲಹೆಗೆ ನರಿಮನ್ ಪ್ರತಿಕ್ರಿಯೆ ನೀಡಿರಲಿಲ್ಲ.
ಪರಿಸರ ಪ್ರಭಾವ, ಭೂವಿಜ್ಞಾನ ಶಕ್ಯತೆ, ಆರ್ಥಿಕ ವ್ಯವಹಾರ ಮತ್ತು ಸುನಾಮಿ, ಚಂಡಮಾರುತ, ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳ ಕುರಿತಾದ ಮುಂಜಾಗ್ರತಾ ಸುರಕ್ಷತೆ ಮುಂತಾದವುಗಳನ್ನು ಈ ನೂತನ ಸಮಿತಿಯು ಪರಿಗಣಿಸಲಿದೆ.
|