20 ಬಾಂಬ್‌ಗಳು ಸ್ಫೋಟಗೊಂಡು ಸೂರತ್ ಇಡೀ ಛಿದ್ರವಾಗುವ ಸಾಧ್ಯತೆಗಳನ್ನು ತಪ್ಪಿಸಿದ್ದು ಯಾರು? ತಜ್ಞರ ಪ್ರಕಾರ, ಇಲ್ಲಿ ಪತ್ತೆಯಾಗಿರುವ ಬಾಂಬ್‌ಗಳಲ್ಲಿನ ಸರ್ಕ್ಯೂಟ್‌ಗಳ ವಿನ್ಯಾಸದ ದೋಷದಿಂದಾಗಿ ಈ ಬಾಂಬ್‌ಗಳು ಸಿಡಿಯಲಿಲ್ಲ.
ಈ ವಜ್ರದ ನಗರಿಯ ವಿವಿಧೆಡೆ ಪತ್ತೆಯಾದ ಸುಮಾರು 20 ಸಜೀವ ಬಾಂಬ್‌ಗಳನ್ನು ಪರಿಶೀಲಿಸಿ, ಗಾಂಧಿನಗರದ ಫೋರೆನ್ಸಿಕ್ ವಿಜ್ಞಾನ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಫೋರೆನ್ಸಿಕ್ ಪರೀಕ್ಷೆಯ ವರದಿಯ ಆಧಾರದಲ್ಲಿ ತಜ್ಞರು ಈ ನಿರ್ಣಯಕ್ಕೆ ಬಂದಿದ್ದಾರೆ.
ಟೈಮರ್ ಸರ್ಕ್ಯೂಟ್‌ಗಳ ವಿನ್ಯಾಸವೇ ದೋಷಪೂರಿತವಾಗಿತ್ತು ಎಂಬುದನ್ನು ತಜ್ಞರು ಆರಂಭದಲ್ಲೇ ಪತ್ತೆ ಹಚ್ಚಿದರು ಎಂದು ಫೋರೆನ್ಸಿಕ್ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಎಂ.ಎಸ್.ದಹಿಯಾ ತಿಳಿಸಿದ್ದಾರೆ.
ಎಲ್ಲ ಬಾಂಬ್‌ಗಳಲ್ಲಿ ಬಳಸಲಾಗಿದ್ದ ಇಂಟಿಗ್ರೇಟೆಡ್ ಸರ್ಕ್ಯೂಟ್ ಚಿಪ್‌ಗಳೆಲ್ಲವೂ ಒಂದೇ ಮಾದರಿಯವು ಎಂದು ಹೇಳಿರುವ ಅವರುಸ ಈ ಬಾಂಬುಗಳು ಸಿಡಿಯದಿರಲು ಬೇರೆ ಕಾರಣಗಳೂ ಇರಬಹುದೇ ಎಂಬ ಬಗ್ಗೆ ತಪಾಸಣೆ ಮುಂದುವರಿದಿದೆ ಎಂದಿದ್ದಾರೆ.
ಆದರೆ ಸೂರತ್ ಬಾಂಬುಗಳಲ್ಲಿ ಬಳಸಲಾಗಿದ್ದ ಸರ್ಕ್ಯೂಟ್‌ಗಳು ಅಹಮದಾಬಾದ್ ಸ್ಫೋಟದಲ್ಲಿ ಬಳಸಿದವುಗಳಿಗಿಂತ ಭಿನ್ನವಾಗಿದ್ದವು. ಸೂರತ್ ಬಾಂಬ್‌ಗಳಲ್ಲಿ ಚಿಪ್‌ಗಳನ್ನು ಬಳಸಲಾಗಿದ್ದರೆ, ಅಹಮದಾಬಾದ್ ಬಾಂಬ್‌ಗಳಲ್ಲಿ ಅನಲಾಗ್ ಟೈಮರ್ ಸಾಧನಗಳನ್ನು ಉಪಯೋಗಿಸಲಾಗಿತ್ತು. ಸೂರತ್‌ನಲ್ಲಿ ಬಾಂಬ್‌ಗಳನ್ನು ಮರದ ಮೇಲೆ, ಬಿಲ್‌ಬೋರ್ಡ್‌ಗಳ ಮರೆಯಲ್ಲಿ ಮುಂತಾದೆಡೆ ಇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕುರಿತು ತನಿಖೆ ನಡೆಸಲು ತೀವ್ರ ತೊಂದರೆ ಎದುರಿಸುತ್ತಿದ್ದು, ಫೋರೆನ್ಸಿಕ್ ತಜ್ಞರ ಪೂರ್ಣ ವರದಿಯನ್ನೇ ಅವರು ನೆಚ್ಚಿಕೊಂಡಿದ್ದಾರೆ.
|