ಬೆಂಗಳೂರು ಮತ್ತು ಅಹಮದಾಬಾದಿನಲ್ಲಿ ಸರಣಿ ಬಾಂಬ್ ಸ್ಫೋಟದ ಮತ್ತು ಸೂರತ್‌ನಲ್ಲಿ ಸಜೀವ ಬಾಂಬ್ ಪತ್ತೆಯಾದ ಹಲವು ದಿನಗಳ ನಂತರ, ಘಟನೆಗೆ ಕಾರಣರಾದ ಉಗ್ರಗಾಮಿ ಜಾಲವನ್ನು ಬೇಧಿಸುವಲ್ಲಿ ತನಿಖಾದಳವು ಪ್ರಮುಖ ಮುನ್ನಡೆ ಸಾಧಿಸಿದೆ.
ಮುಂಬಯಿನಿಂದ ಕದ್ದು ಸೂರತ್‌ನಲ್ಲಿ ಸ್ಫೋಟಕ ತುಂಬಿಸಿ ಅಲ್ಲಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳಲ್ಲಿ ಒಂದು ಕಾರಿನ ಚಿತ್ರವನ್ನು ಪೂನಾದ ಟಾಲ್‌ಗೇಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾವು ಸೆರೆ ಹಿಡಿದಿದೆ. ಆದರೆ, ಇದರಲ್ಲಿ ಕಾರಿನ ಚಾಲಕನ ಚಿತ್ರವನ್ನು ಸೆರೆಹಿಡಿಯಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಈವರೆಗೆ ಸಂಗ್ರಹಿಸಲಾದ ಸಾಕ್ಷಿಗಳನ್ನು ಆಧರಿಸಿ, ಜುಲೈ ಎರಡನೇ ವಾರದಲ್ಲಿ ಈ ಸ್ಫೋಟಕ ತುಂಬಿದ ಕಾರನ್ನು ಮುಂಬಯಿನಿಂದ ಕದ್ದು ನಂತರ ಪೂನಾ ಮೂಲಕ ಗುಜರಾತಿಗೆ ತರಲಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಿಸಿಟಿವಿಯಿಂದ ಸೆರೆಯಾದ ಚಿತ್ರವನ್ನು ಮುಂಬಯಿ ಮತ್ತು ಅಹಮದಾಬಾದ್ ತನಿಖಾತಂಡಕ್ಕೆ ಹಸ್ತಾಂತರಿಸಲಾಗಿದೆ.
ಇದರೊಂದಿಗೆ, ಸರಣಿ ಬಾಂಬ್ ಸ್ಫೋಟದಲ್ಲಿ ಭೂಗತಜಗತ್ತಿನ ಕೈವಾಡದ ಬಗ್ಗೆ ಮುಂಬಯಿ ಮತ್ತು ಅಹಮದಾಬಾದ್ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಬಾಂಬ್ ಸ್ಫೋಟ ಸಂಚಿನಲ್ಲಿ ಸ್ಥಳೀಯರ ಕೈವಾಡವೂ ಇದೆ ಎಂಬುದಾಗಿ ಶಂಕಿಸಲಾಗಿದೆ.
ಸೂರತ್‌ನ ವಿವಿಧ ಭಾಗಗಳಲ್ಲಿ ಬಾಂಬ್ ಇರಿಸುವಲ್ಲಿ ಸ್ಥಳೀಯರ ಕೈವಾಡವಿರುವುದು ವ್ಯಕ್ತವಾಗಿರುವುದರಿಂದ ಸೂರತ್‌ನ ಸಜೀವ ಬಾಂಬ್ ಪತ್ತೆಯ ತನಿಖೆಯು ವಿಶೇಷ ತಿರುವನ್ನು ಪಡೆದುಕೊಂಡಿದೆ. ಏನೇ ಆದರೂ, ಅಹಮದಾಬಾದ್‌ನಲ್ಲಿ ಬಾಂಬ್ ಸ್ಫೋಟ ನಡೆಯುವ ಮುನ್ನವೇ ಸೂರತ್‌ನಲ್ಲಿ ಬಾಂಬ್ ಇರಿಸಲಾಗಿತ್ತು ಎಂದು ಸೂರತ್ ಪೊಲೀಸ್ ಕಮಿಶನರ್ ಆರ್.ಎಂ.ಎಸ್ ಬ್ರಾರ್ ತಿಳಿಸಿದ್ದಾರೆ.
|