ಸ್ಟಾರ್ ಸಿಂಗರ್ ವಿಜೇತ ಇಶ್ಮಿತ್ ಸಿಂಗ್ ಅವರು ಮಾಲ್ಡೀವ್ಸ್‌ನ ರೆಸಾರ್ಟ್‌ನಲ್ಲಿನಲ್ಲಿರುವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಹಿರಿಯ ವೈದ್ಯರು ತಿಳಿಸಿದ್ದಾರೆ.
ಹತ್ತೊಂಬತ್ತು ವರ್ಷದ ಗಾಯಕ ಇಶ್ಮಿತ್ ಸಿಂಗ್ ಅವರ ಸಾವು 'ಆಸ್ಪಿಕ್ಸಿಯಾ'ದಿಂದ ಉಂಟಾಗಿದೆ ಎಂಬುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿರುವುದಾಗಿ ಲುಧಿಯಾನಾ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಸಾವಿನ ಕಾರಣವನ್ನು ತಿಳಿಯುವ ಉದ್ದೇಶದಿಂದ ಕುಟುಂಬದ ಮನವಿಯ ಮೇರೆಗೆ ಮರಣೋತ್ತರ ಪರೀಕ್ಷೆಯನ್ನು ಸಿವಿಲ್ ಆಸ್ಪತ್ರೆಯ ಮೂರು ವೈದ್ಯರ ತಂಡವು ನಡೆಸಿದೆ ಎಂದು ಅವರು ಹೇಳಿದ್ದಾರೆ.
ಇಶ್ಮಿತ್ ಅವರ ದೇಹದ ಕೆಲವು ಭಾಗಗಳನ್ನು ಪಟಿಯಾಲಾ ರಾಜೀಂದ್ರ ಮೆಡಿಕಲ್ ಕಾಲೇಜ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಇಶ್ಮಿತ್ ತಲೆಯಲ್ಲಿನ ಗಾಯದ ಕುರಿತಾಗಿ ಕೇಳಲಾದ ಪ್ರಶ್ನೆಗೆ, ಈಜುಕೊಳದ ನೆಲಕ್ಕೆ ತಲೆ ಬಡಿದಿರುವ ಕಾರಣ ಸ್ವಲ್ಪ ಮಟ್ಟಿನ ಗಾಯ ಉಂಟಾಗಿರಬಹುದು ಆದರೆ, ಆದು ಸಾವಿಗೆ ಕಾರಣವಲ್ಲ ಎಂಬುದಾಗಿ ಹರ್ವಿಂದರ್ ಸಿಂಗ್ ಉತ್ತರಿಸಿದ್ದಾರೆ.
ವಾಯ್ಸ್ ಆಫ್ ಇಂಡಿಯಾ-2007ರ ವಿಜೇತನಾಗಿರುವ ಇಶ್ಮಿತ್ ಸಿಂಗ್ ಶುಕ್ರವಾರ ಸ್ಟೇಜ್ ಕಾರ್ಯಕ್ರಮ ನೀಡುವ ಸಲುವಾಗಿ ಮಾಲ್ಡೀವ್ಸ್‌ಗೆ ತೆರಳಿದ್ದರು.
ತನ್ನ ಮಧುರ ಕಂಠದಿಂದ ಮಿಲಿಯಗಟ್ಟಲೆ ಜನರ ಹೃದಯವನ್ನು ಗೆದ್ದಿದ್ದ ಈ ದುರ್ದೈವಿ ಗಾಯಕ ಹೋಟೇಲ್‌ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ಇದೊಂದು ಅಸಹಜ ಸಾವಲ್ಲ ಹತ್ಯೆ ಎಂಬುದಾಗಿ ಕುಟುಂಬದ ಮೂಲಗಳು ಆರೋಪಿಸಿವೆ.
|