ಮಹಾರಾಷ್ಟ್ರದಲ್ಲಿನ ಬುಡಕಟ್ಟು ಜನಾಂಗಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೂಕ್ತ ಶಿಕ್ಷಣ ನೀಡುವುದರಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಸಮಾಜ ಸೇವಾಕರ್ತರಾದ ಬಾಬಾ ಅಮ್ಟೆ ಅವರ ಪುತ್ರ ಡಾ. ಪ್ರಕಾಶ್ ಅಮ್ಟೆ ಮತ್ತು ಸೊಸೆ ಡಾ. ಮಂದಾಕಿನಿ ಅಮ್ಟೆ ದಂಪತಿಗಳಿಗೆ 2008ನೇ ಸಾಲಿನ ಪ್ರತಿಷ್ಟಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನೊಬಲ್ ಪ್ರಶಸ್ತಿಗೆ ಸಮನಾಗಿರುವ ಪ್ರಶಸ್ತಿಗೆ ಆಯ್ಕೆಯಾಗಿರುವ ವಿವಿಧ ದೇಶಗಳ ಏಳು ಜನರ ಪೈಕಿ ಡಾ.ಪ್ರಕಾಶ್ ಮತ್ತು ಮಂದಾಕಿನಿ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಫಿಲಿಫೈನ್ಸ್‌ನ ಮನಿಲಾದಲ್ಲಿರುವ ಮ್ಯಾಗ್ಸೆಸ್ಸೆ ಅವಾರ್ಡ್ ಪೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾಗಿರುವ ಗಡ್‌ಚಿರೋಳಿ ವ್ಯಾಪ್ತಿಯಲ್ಲಿ ಬರುವ ಹೆಮಲ್ಕಸಾ ಎಂಬ ಬುಡಕಟ್ಟು ಗ್ರಾಮದಲ್ಲಿ ದಂಪತಿಗಳಿರ್ವರೂ ಶಾಲೆ ಮತ್ತು ಆಸ್ಪತ್ರೆಯನ್ನು ನಡೆಸುತ್ತಿದ್ದು ಅಲ್ಲಿ ನೆಲೆಸಿರುವ ಮಾದಿಯಾ ಗೊಂಡ ಬುಡಕಟ್ಟು ಜನಾಂಗದವರನ್ನು ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಇದೇ ವರ್ಷ ಫೆಬ್ರವರಿಯಲ್ಲಿ ದಿವಂಗತರಾದ ಪ್ರಕಾಶ ಅವರ ತಂದೆ ಬಾಬಾ ಅಮ್ಟೆ ಅವರು 1985ರಲ್ಲಿ ಸಮಾಜ ಸೇವೆಗೆ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದರು. ಒಟ್ಟಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬವೊಂದು ಒಟ್ಟು ಮೂರು ಪ್ರತಿಷ್ಟಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರವಾಗಿದೆ.
|