ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದಲ್ಲಿ ಸಂಬಂಧವಿರುವ ಆರೋಪದ ಮೇಲೆ ಬಂಧಿಸಲಾದ ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತ ಅಬ್ದುಲ್ ಹಲೀಂಗೆ ಸುಳ್ಳುಪತ್ತೆ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 26ರ ಅಹಮದಾಬಾದ್ ಸ್ಫೋಟದ ನಂತರ ಬಂಧಿಸಲಾದ ಹಲೀಂನನ್ನು ಆಗಸ್ಟ್ ಹತ್ತರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗುವುದು. 2002ರ ಗುಜರಾತ್ ಗಲಭೆಯ ನಂತರ ಭಯೋತ್ಪಾದಕ ಚಟುವಟಿಕೆಗಳಿಗೆ ಜನರನ್ನು ಪ್ರಚೋದಿಸುತ್ತಿದ್ದ ಹಿನ್ನೆಲೆಯಲ್ಲಿ ಈತ ಪೊಲೀಸರಿಗೆ ಬೇಕಾದವನಾಗಿದ್ದನು.
1993ರ ಮುಂಬಯಿ ಸ್ಫೋಟ ಮತ್ತು ಇತರ ಪ್ರಕರಣಗಳಲ್ಲಿ ಅಪೇಕ್ಷಿತ ವ್ಯಕ್ತಿಯಾಗಿರುವ ಕರೀಂ ದುಂಡಾ ಜೊತೆ ಹಲೀಂಗೆ ಸಂಬಂಧವಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ದುಂಡಾ ವಾಸವಿದ್ದ ಅಹಮದಾಬಾದಿನ ದಾನಿ ಲಿಂಬ್ಡಾ ಪ್ರದೇಶದಲ್ಲಿ ಹಲೀಂ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದರೊಂದಿಗೆ, ಅಹಮದಾಬಾದ್ ಸ್ಫೋಟದಲ್ಲಿ ದುಂಡಾ ಕೈವಾಡವೂ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲೀಂಗೆ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
|