ಬಾನಂಗಳದಲ್ಲಿ ಹಗಲಲ್ಲೇ ಕತ್ತಲಿನ ಪರಿಸ್ಥಿತಿ ವಿಶ್ವದ ಕೆಲವೆಡೆ ವ್ಯಕ್ತವಾಗುವುದರೊಂದಿಗೆ ಸೂರ್ಯಗ್ರಹಣವು ಶುಕ್ರವಾರ ದೇಶದಲ್ಲೂ ವಿವಿಧ ಭಾಗಗಳಲ್ಲಿ ಭಾಗಶಃ ಗೋಚರಿಸಿತು.
ಉತ್ತರ ಅಮೆರಿಕ, ಗ್ರೀನ್ಲೆಂಡ್, ಉತ್ತರ ಯೂರೋಪ್ ಮತ್ತು ಜಪಾನ್ ಹೊರತಾದ ಏಷ್ಯಾದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಲಿದರೆ, ಭಾರತದಲ್ಲಿ ಇದು ಖಂಡಗ್ರಾಸ ರೂಪದಲ್ಲಿ ಗೋಚರಿಸಿತು.
ಕೆನಡಾದ ನ್ಯೂ ಫೌಂಡ್‌ಗೆ ಸಮೀಪದ ಉತ್ತರ ಅಟ್ಲಾಂಟಿಕ್ ಸಮುದ್ರದ ಬಿಂದುವಿನಲ್ಲಿ ಸ್ಥಳೀಯ ಸೂರ್ಯೋದಯದ ಸಂದರ್ಭದಲ್ಲಿ, ಚಂದ್ರನ ನೆರಳು ಮೊದಲು ಭೂಮಿಯ ಮೇಲೆ ಬೀಳುವಾಗ ಅಂದರೆ ಭಾರತೀಯ ಕಾಲಮಾನ ಪ್ರಕಾರ ಸೂರ್ಯಗ್ರಹಣವು ಮಧ್ಯಾಹ್ನ 1.34ಕ್ಕೆ ಆರಂಭವಾಗಿತ್ತು.
ಅಂಡಮಾನ್ ನಿಕೋಬಾರ್ ದ್ವೀಪ ಸಮೀಪ ಬಂಗಾಳ ಕೊಲ್ಲಿಯ ಬಿಂದುವೊಂದರಲ್ಲಿ ಸ್ಥಳೀಯ ಸೂರ್ಯಾಸ್ತದ ವೇಳೆ, ಚಂದ್ರನ ನೆರಳು ಭೂಮಿಯ ಮೇಲಿಂದ ಸರಿದಾಗ, ಅಂದರೆ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.08ಕ್ಕೆ ಗ್ರಹಣ ಮುಕ್ತಾಯವಾಯಿತು.
ಉತ್ತರ ಕೆನಡಾದ ಆಗ್ನೇಯ ತೀರದಲ್ಲಿರುವ ವಿಕ್ಟೋರಿಯಾ ದ್ವೀಪದ ಬಿಂದುವೊಂದರಲ್ಲಿ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 2.53 ಗಂಟೆಗೆ ಗ್ರಹಣ ಪರಿಪೂರ್ಣ ರೂಪ ಪಡೆಯಿತು. ಈ ಪೂರ್ಣತೆಯ ಹಂತವು 4.50ಕ್ಕೆ ಆಗ್ನೇಯ ಚೀನಾದ ಕ್ಸಿಯಾನ್ ಸಮೀಪ ಮುಕ್ತಾಯವಾಗಲಿದೆ.
|