ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ) ಭಾರತದ ಸುರಕ್ಷತಾ ಒಪ್ಪಂದಕ್ಕೆ 'ಗ್ರೀನ್ ಸಿಗ್ನಲ್' ನೀಡುವ ಮೂಲಕ ಭಾರತ ಮತ್ತು ಅಮೆರಿಕ ಅಣು ಒಪ್ಪಂದ ದಾರಿ ಸುಗಮವಾದಂತಾಗಿದೆ.
ಶುಕ್ರವಾರದಂದು ಭಾರತ ಮತ್ತು ಅಮೆರಿಕ ಅಣು ಒಪ್ಪಂದದ ಕುರಿತು ಸುರಕ್ಷತಾ ಒಪ್ಪಂದಕ್ಕೆ ಎಲ್ಲಾ 35ಸದಸ್ಯರು ಒಮ್ಮತದ ಅಭಿಪ್ರಾಯದ ಮೂಲಕ ಸಮ್ಮತಿ ಸೂಚಿಸುವ ಮೂಲಕ ಭಾರತದ ಮುಂದಿನ ಹೆಜ್ಜೆ ಇಡಲು ಅನುಕೂಲವಾದಂತಾಗಿದೆ.
ಆ ನಿಟ್ಟಿನಲ್ಲಿ ಭಾರತ ಎನ್‌ಎಸ್‌ಜಿ(ಪರಮಾಣು ಇಂಧನ ಪೂರೈಕಾ ದೇಶಗಳ ಗುಂಪು)ಯೊಂದಿಗೆ ಮಾತುಕತೆ ನಡೆಸಲು ಮುಂದಿನ ಹೆಜ್ಜೆ ಇಡಲಿದೆ.
ಅಣು ಒಪ್ಪಂದದ ಎರಡನೇ ಹಂತದ ಅಂಗವಾಗಿ ಪರಮಾಣು ಇಂಧನ ಪೂರೈಕಾ 45ದೇಶಗಳ ಸದಸ್ಯರ ಗುಂಪಿನ ಜತೆ ಭಾರತ ಮುಂದಿನ ಪ್ರಕ್ರಿಯೆಗೆ ಮುಂದಾಗುವುದಾಗಿ ಹೇಳಿದೆ.
ಇವೆರಡೂ ಹಾದಿ ನೆರವೇರಿದ ಬಳಿಕ ಅಣು ಒಪ್ಪಂದದ ಅಂತಿಮ ಹಂತವಾಗಿ, ಅಮೆರಿಕ ಕಾಂಗ್ರೆಸ್ ಅಂಕಿತ ಹಾಕುವ ಮೂಲಕ ಒಪ್ಪಂದ ಅಧಿಕೃತವಾಗಲಿದೆ.
ಭಾರತಕ್ಕೆ ಸಂದ ಜಯ: ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ಕುರಿತು ಐಎಇಎ ಸುರಕ್ಷತಾ ಒಪ್ಪಂದಕ್ಕೆ ಸಮ್ಮತಿ ಸೂಚಿಸಿರುವುದು ಭಾರತಕ್ಕೆ ಸಂದ ಜಯವಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಅವರು ಬಣ್ಣಿಸಿದ್ದಾರೆ.
|