ಭಾರತದ ಸುರಕ್ಷತಾ ಒಪ್ಪಂದಕ್ಕೆ ಐಎಇಎಯ ಅನುಮೋದನೆಯು, ಭಾರತದ ಅಣ್ವಸ್ತ್ರಶಕ್ತ ರಾಷ್ಟ್ರ ಎಂಬ ಸ್ಥಾನಮಾನವನ್ನು ಮಾನ್ಯಮಾಡುವುದಿಲ್ಲ ಅಥವಾ ನಿರಂತರ ಇಂಧನ ಪೂರೈಕೆ ಭರವಸೆ ಮುಂತಾದ ಹಿತಾಸಕ್ತಿಗಳನ್ನು ಪರಿಗಣಿಸುವುದಿಲ್ಲ ಎಂದು ಎಡಪಕ್ಷಗಳು ತಿಳಿಸಿವೆ.
123 ಒಪ್ಪಂದವು ಹೈಡ್ ಕಾಯಿದೆಗೆ ಖಂಚಿತವಾಗಿ ಹೊಂದಿಕೊಂಡಿದೆ ಎಂದು ಅಮೆರಿಕದ ನಿಕೋಲಸ್ ಬರ್ನ್ಸ್ ಹೇಳಿರುವುದನ್ನು ಉಲ್ಲೇಖಿಸಿದ ಎಡಪಕ್ಷ ನಾಯಕರು, ತಮ್ಮ ಆತಂಕವು ಇದರಿಂದ ನಿಜವಾದಂತಾಗಿದೆ ಎಂದು ತಿಳಿಸಿದ್ದಾರೆ.
'ಹೈಡ್ ಕಾಯಿದೆಯು ಜಾರಿಯಲ್ಲಿರುತ್ತದೆ ಎಂದು ಬರ್ನ್ಸ್ ಹೇಳುತ್ತಾರೆ, ಆದರೆ ನಮ್ಮ ಸರಕಾರವು, 'ಅಮೆರಿಕದ ಕಾನೂನು ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಹೇಳುತ್ತಿದೆ. ಇದು ಭಾರತದ ಹಿತಾಸಕ್ತಿಗೆ ವಿರುದ್ಧವಾದ ಕಾರಣಕ್ಕಾಗಿ ನಾವು ಒಪ್ಪಂದವನ್ನು ವಿರೋಧಿಸಿದೆವು ಮತ್ತು ಯುಪಿಎಗೆ ನೀಡುತ್ತಿದ್ದ ಬೆಂಬಲ ಹಿಂತೆಗೆದೆವು. ಎಡಪಕ್ಷಗಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ.
ಕಾರ್ಯತಃ ಅಥವಾ ನ್ಯಾಯಯುತವಾಗಿ ನಮಗೆ ಅಣ್ವಸ್ತ್ರಶಕ್ತ ರಾಷ್ಟ್ರವೆಂಬ ಸ್ಥಾನಮಾನ ದೊರೆಯುವುದಿಲ್ಲ. ನಿರಂತರ ಇಂಧನ ಪೂರೈಕೆಯ ಬಗ್ಗೆ ಯಾವುದೇ ಭರವಸೆ ಇಲ್ಲ. ಎಡಪಕ್ಷಗಳ ಆತಂಕವು ನಿಜವಾಗಲಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಎಸ್‌ಪಿ, ಟಿಡಿಪಿ, ಜೆಡಿ(ಎಸ್) ಮತ್ತು ಆರ್‌ಎಲ್‌ಡಿ ಜೊತೆ ಸೇರಿಕೊಂಡು ಶೀಘ್ರದಲ್ಲೇ ರಾಷ್ಟ್ರಾದ್ಯಂತ ಆಂದೋಲನವನ್ನು ನಡೆಸುವುದಾಗಿ ಎಡಪಕ್ಷಗಳು ತಿಳಿಸಿವೆ.
|