ಅಮರನಾಥ ದೇವಾಲಯದ ಭೂ ವಿವಾದ ಕುರಿತಂತೆ ಕಳೆದ ಕೆಲವು ದಿನಗಳಿಂದ ಜಮ್ಮುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಮ್ಮುವಿನಲ್ಲಿ ಸೇನೆಗೆ ಕರೆ ನೀಡಲಾಗಿದೆ.
ಸಾಂಬಾದಲ್ಲಿ ಪೊಲೀಸ್ ಗುಂಡಿನ ದಾಳಿ ವೇಳೆ ಎರಡು ಮಂದಿ ಸಾವನ್ನಪ್ಪಿ ಅನೇಕ ಮಂದಿ ಗಾಯಗೊಂಡ ನಂತರ ಅಮರನಾಥ ದೇವಾಲಯದ ಭೂ ವಿವಾದದ ಕುರಿತಾಗಿ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾರೂಪಕ್ಕೆ ತಾಳಿತ್ತು.
ಅಮರನಾಥ ವಾರ್ಷಿಕ ಯಾತ್ರೆಯ ಹೊಣೆಗಾರಿಕೆಯನ್ನು ಅಮರನಾಥ ಪವಿತ್ರ ಮಂಡಳಿಗೆ ಹಿಂತಿರುಗಿಸಲಾಗುವುದು ಎಂದು ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಘೋಷಣೆಯ ನಡುವೆಯೂ ಈ ಘಟನೆ ಸಂಭವಿಸಿದೆ. ಜಮ್ಮು ಮತ್ತು ಸಾಂಬಾದಲ್ಲಿ ಕರ್ಫ್ಯೂ ವಿಧಿಸಲಾಗಿದ್ದರೂ, ಅದನ್ನು ಉಲ್ಲಂಘಿಸಿ ಪ್ರತಿಭಟನೆಕಾರರು ಪ್ರತಿಭಟನೆ ನಡೆಸಿದ್ದರು.
ಏತನ್ಮಧ್ಯೆ, ಅಮರನಾಥ ಭೂವಿವಾದದ ಕುರಿತಾಗಿ ವೋಹ್ರಾ ಅವರೊಂದಿಗೆ ಯಾವುದೇ ಹೆಚ್ಚಿನ ಮಾತುಕತೆಯನ್ನು ನಡೆಸುವುದಿಲ್ಲ ಎಂಬುದಾಗಿ ಅಮರನಾಥ ಸಂಘರ್ಷ ಸಮಿತಿಯು ತಿಳಿಸಿದೆ.
ಈ ವಿವಾದವನ್ನು ಪರಿಹರಿಸುವ ಕುರಿತಾಗಿ ಯಾವುದೇ ನೀಲನಕ್ಷೆ ಇಲ್ಲದಿರುವ ಕಾರಣ, ಈ ಕುರಿತಾಗಿ ಹೆಚ್ಚಿನ ಮಾತುಕತೆಯನ್ನು ನಡೆಸುವುದಿಲ್ಲ ಎಂಬುದಾಗಿ ನಿರ್ಧರಿಸಲಾಗಿದೆ ಎಂದು ಸಂಘರ್ಷ ಸಮಿತಿಯ ವಕ್ತಾರ ತಿಲಕ್ ರಾಜ್ ಶರ್ಮ ತಿಳಿಸಿದ್ದಾರೆ.
|