ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅನ್ಯಧರ್ಮೀಯಳ ಮದುವೆ: ಹಿಂದೂ ಯುವಕನ ಶಿರಚ್ಛೇದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನ್ಯಧರ್ಮೀಯಳ ಮದುವೆ: ಹಿಂದೂ ಯುವಕನ ಶಿರಚ್ಛೇದ Search similar articles
ಅನ್ಯ ಧರ್ಮೀಯಳನ್ನು ವಿವಾಹವಾದ ಹಿಂದೂ ಯುವಕನೊಬ್ಬನಿಗೆ 'ಮರಣದಂಡನೆ' ವಿಧಿಸಿದ ಅಕ್ರಮ ನ್ಯಾಯ ಪಂಚಾಯತಿಯೊಂದು, ಆತನ ಶಿರಚ್ಛೇದ ಮಾಡಿದ ದಾರುಣ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಅಷ್ಟು ಮಾತ್ರವಲ್ಲದೆ, ಆತನ ಅಸಹಾಯಕ ಪತ್ನಿಯನ್ನು ಗ್ರಾಮಸ್ಥರು 15 ದಿನಗಳವರೆಗೆ ಪೊಲೀಸರ ಬಳಿ ಹೋಗಲು ಅವಕಾಶ ನೀಡಲಿಲ್ಲ.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಲಕ್ಷಣ್‌ಪುರ ಗ್ರಾಮದ ಮುನೀರ್ ಬೀಬಿ ಎಂಬಾಕೆ, ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದಾಗ ಬಿಹಾರದ ಶೈಲೇಂದ್ರ ಪ್ರಸಾದ ಎಂಬಾತನ ಪರಿಚಯವಾಗಿ ಅವರಿಬ್ಬರೂ ಪ್ರೇಮಿಗಳಾದರು ಮತ್ತು ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಈಗ ಮುನೀರ್ ಬೀಬಿ 10 ತಿಂಗಳ ಮಗುವಿನ ತಾಯಿ.

ಜುಲೈ 1ರಂದು ಹಳ್ಳಿಗೆ ಮರಳುವ ಮೊದಲು ಧರ್ಮ ಬೇರೆ ಎಂಬುದು ಈ ಇಬ್ಬರ ನಡುವೆ ಯಾವುದೇ ಸಮಸ್ಯೆಯಾಗಿರಲಿಲ್ಲ, ಶೈಲೇಂದ್ರ ಪ್ರಸಾದ್, ಮುನ್ನಾ ಶೇಖ್ ಎಂಬ ಹೆಸರಿನಡಿ ತನ್ನ ಧರ್ಮದ ಗುರುತನ್ನು ಮರೆಮಾಚಿ ಹಳ್ಳಿಗೆ ಬಂದಿದ್ದರು.

ಆದರೆ ಕೆಲವೇ ದಿನಗಳಲ್ಲಿ ಹುಡುಗಿಯ ತಂದೆಗೆ ತನ್ನ ಅಳಿಯನ ಧರ್ಮದ ಬಗ್ಗೆ ಸಂಶಯ ಹುಟ್ಟಿ, ಜುಲೈ 14ರಂದು ಅವರು ಈ ಬಗ್ಗೆ ಗ್ರಾಮದ ಹಿರಿಯರಿಗೆ ತಿಳಿಸಿದರು. 22 ಸದಸ್ಯರ ನ್ಯಾಯಬಾಹಿರ ಪಂಚಾಯತಿ ಕಟ್ಟೆಯು ಪ್ರಸಾದ್‌ನನ್ನು ಕರೆಯಿಸಿ ಅವನ ನಿಜವಾದ ಧರ್ಮವನ್ನು ಪತ್ತೆಹಚ್ಚಿದರು. ಅವನಿಗೆ 'ಮರಣದಂಡನೆ' ವಿಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಜುಲೈ 17ರಂದು ಸೆಣಬು ತೋಟದ ಬಳಿ ಪ್ರಸಾದ್‌ರ ಶಿರಚ್ಛೇದಿತ ದೇಹ ಗೋಣಿ ಚೀಲವೊಂದರಲ್ಲಿ ಪತ್ತೆಯಾಗಿತ್ತು, ಆದರೆ ಯಾವುದೇ ದೂರುಗಳು ಇಲ್ಲದೇ ಇರುವುದರಿಂದ ದೇಹ ಯಾರದೆಂದು ಪತ್ತೆ ಹಚ್ಚುವುದು ಪೊಲೀಸರಿಂದ ಸಾಧ್ಯವಾಗಿರಲಿಲ್ಲ.

ಹತ್ತು ದಿನಗಳ ನಂತರ ಮುನೀರ್ ಬೀಬಿ, ಅವರ ತಾಯಿ ಮತ್ತು ತಮ್ಮ ಬೆಹ್ರಾಮ್‌ಪುರ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ಸಲ್ಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂತು. ಈ ಸಂಬಂಧವಾಗಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ಪೊಲೀಸರ ಬಳಿ ಹೋಗಲು ಪ್ರಯತ್ನಸಿದೆವು. ಆದರೆ ಗ್ರಾಮಸ್ಥರು ನಮ್ಮನ್ನು ಬೆದರಿಸಿದರು" ಎಂದು ಮುನೀರ್ ತಿಳಿಸಿದ್ದಾರೆ. ಹುಡುಗಿಯ ತಂದೆ ಮತ್ತು ಇತರ ಕೆಲ ಗ್ರಾಮಸ್ಥರು ಪರಾರಿಯಾಗಿದ್ದಾರೆ.
ಮತ್ತಷ್ಟು
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್
ಕಾವೇರಿದ ಪ್ರತಿಭಟನೆ: ಜಮ್ಮುವಿನಲ್ಲಿ ಸೇನೆಗೆ ಬುಲಾವ್
'ಅಣು' ಆತಂಕ ನಿಜವಾಗಿದೆ: ಎಡಪಕ್ಷಗಳ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ
ಭಾರತದಲ್ಲಿ ಸೂರ್ಯಗ್ರಹಣ ಗೋಚರ: ಚಿತ್ರ ಇಲ್ಲಿದೆ